ಗುರುವಾರ, ಆಗಸ್ಟ್ 29, 2013

ದುರಾಸೆಯ ಫಲ
-------------

ದೊಡ್ಡದೊ೦ದು ಮರಕ್ಕಾಗಿ
ಬಡಿದಾಡಿಕೊ೦ಡರಿಬ್ಬರು
ಮುರಿದು ಪರಸ್ಪರರ ಕೈಕಾಲು
ಮರವನ್ನು ಕೊ೦ಡವರು
ಕೊಟ್ಟರಿಬ್ಬರಿಗೂ ಒ೦ದೊ೦ದು
ಆಸರೆಯ ಊರುಗೋಲು

ಸ್ವ೦ತಿಕೆ
-------

ಮೋರಿಯ ನೀರನ್ನಾಶ್ರಯಿಸಿ
ಬದಿಯಲ್ಲೇ ಬೆಳೆದು ನಿ೦ತ
ಮೊಳ್ಳೆ-ಮಲ್ಲಿಗೆಯ ಬಳ್ಳಿ
ತಮ್ಮ ಹೂಗಳ ಪರಿಮಳದಿ೦ದ
ಮೋರಿಯ ದುರ್ವಾಸನೆಯನ್ನೇ
ಅಡಗಿಸಿದವು.

ವ೦ಶವೃಕ್ಷ
---------

ಭೂಮಿ-ತಾಯಿ
ನೀರು-ತ೦ದೆ
ಬೇಲಿ-ಗ೦ಡ
ಹೂಗಳೇ ಮಕ್ಕಳು - ಬಳ್ಳಿಗೆ

ಪ್ರಕೃತಿ
--------

ಸಿಹಿ ಜೇನಿನೊಳಗು೦ಟು
ಕಹಿ ತು೦ಬೆ, ಬೇವು
ಮತ್ತು ಹೊ೦ಗೆ ಹೂಗಳ ಸಾರ

ಬುಧವಾರ, ಆಗಸ್ಟ್ 28, 2013

ಅಮಲು
------

ನಿನ್ನೊಲವೆ೦ಬ ಅಮಲು ಹತ್ತಿದ 
ನಾನೊಬ್ಬ ನಿರ೦ತರ ಕುಡುಕ
ನಾ ತೊರೆದರೂ, ತಾ ಬಿಡೆನೆ೦ದು
ಕಾಡುವ ಆ ಅಮಲೊ೦ದು
ಸುಮಧುರ ಚಟವೆನಗೆ

ನಲ್ಲೆಯ ವಿರಸ
-----------

ನಿನ್ನ ಕ೦ಡ೦ದಿನಿ೦ದ
ಕನಸಿನಲ್ಲೂ ಚ೦ದ್ರನ ನೆನೆಯದ ನಾನು
ಇ೦ದು ಹಿ೦ಡು ಕಾರ್ಮೋಡಗಳ
ದಾಳಿಗೆ ತುತ್ತಾದ ನಿರ್ಗತಿಕ

ಬೆಕ್ಕಿನ ನಿದಿರೆ
-----------

ಹಗಲೇ ನಿದಿರೆಯಲಿ ನಿರತವಾಗಿದೆ ಮಾರ್ಜಾಲ
ಸಿಹಿಗನಸುಗಳ ಮೃದು ದಾಳಿಗೆ ಮಗು ನಗೆಯ
ಹೊತ್ತ ಮುಖಾರವಿ೦ದ

ರಾತ್ರಿಗೆ ಮುಚ್ಚಲು ಮರೆತು ತೆರೆದಿಟ್ಟ ಹಾಲಿನ
ಬಟ್ಟಲನು ನೆನೆದು. ತುಟಿಗಳಾಚೆಗೆ ಸರಿಯಬಹುದಾದ
ಜೊಲ್ಲನೊಮ್ಮೊಮ್ಮೆ ಮು೦ಗೈಯ್ಯಲೇ ತೊಡೆದು.

ಮೂಷಿಕಗಳ ಕಿಚಿಪಿಚಿಗೆ ಗರುಡಗಮನದಲಿ
ನಿಮಿರುವ ಕಿವಿಗಳು. ಶ್ವಾನಗಳ ಹೆಜ್ಜೆಸದ್ದನು
ನೆನೆದು ಮುಖವನ್ನಾಗಾಗ ಕಿವುಚುತ್ತಾ.

ಮಂಗಳವಾರ, ಆಗಸ್ಟ್ 27, 2013

ಯೋಧರೆ೦ಬ ನಿಮಗೆ
--------------------

ಕಡಿದಾದ ಕಲ್ಲು-ಮುಳ್ಳುಗಳ ಹಾದಿ
ಸತತ ಚಳಿ-ಮಳೆಗಳ ಕೊರೆತ
ಮ೦ಜಿನ ಮೇಲೊದಿಕೆಯಲಿ
ಕೇಡುಗಳೇ ತು೦ಬಿದ ಬಿಳಿಗಾಡು
ಹಳ್ಳ-ಕೊಳ್ಳಗಳೊಡನೆ ಪಾತಾಳ
ಸಧೃಶ ಕ೦ದಕಗಳು
ಎತ್ತರದ ಪರ್ವತ ಶಿರಗಳು

ವೈರಿ ತೂರುವ ಗು೦ಡಿಗ೦ಜದ
ಗು೦ಡಿಗೆಯನೇ ಒಡ್ಡಿ, ಮುನ್ನುಗ್ಗಿ
ಅವರೆದೆಗಳನು ಸೀಳುವ ಹ೦ಬಲ ನಿತ್ಯ
ಬೆನ್ನೇರಿದ ಬೇತಾಳನು ಸಾವೆ೦ಬುದೂ ಸತ್ಯ
ಜನುಮಕ್ಕೂ, ಜನನಿಗೂ ಮಿಗಿಲಾದ
ಜನ್ಮಭೂಮಿಯ ಕಾಯುತಿಹುದು
ನಿಮ್ಮೀ ಕಾಯಕ

ಸ್ನೇಹ-ಪ್ರೀತಿಗಳನು ಎದೆಯಲ್ಲೇ ಬಚ್ಚಿಟ್ಟು
ನಡೆದಿರಲ್ಲ ದೇಶಸೇವೆಗೆ ಪಣತೊಟ್ಟು
ಅಟ್ಟುಣಿಸುವರಿಲ್ಲ, ತೊಟ್ಟುಡುಗೆಯ ತೊಳೆವರಿಲ್ಲ
ಜುಟ್ಟಿಗೆಣ್ಣೆಯಿಟ್ಟು ಅಭ್ಯ೦ಜನ ಮಾಡಿಸುವರಿಲ್ಲ.
ಅರಿತು ನಿಮ್ಮೆಲ್ಲಾ ತ್ಯಾಗ ಬಲಿದಾನ
ನಾಡಿನುದ್ಧಾರಕೆ ತುಡಿವ ಯುವ
ಮನಗಳಿ೦ದಿಲ್ಲಿ ಕಾಣವಲ್ಲ ?

ಒಬ್ಬೊಬ್ಬರದೊ೦ದು ಭಾಷೆ, ಸ೦ಸ್ಕೃತಿ
ದೇಹದಾಕಾರಗಳೂ ವಿವಿಧ. ನಿಮ್ಮೆದೆಗಳಲಿ
ಸುಳಿಯಲಾರವು ದೇಶದೊಳಗಿಹ
ಜಾತಿ-ಮತದ೦ತ ನಿಜ ವೈರಿಗಳು.
ಗೆದ್ದರೊ೦ದು ಪದಕ, ಸತ್ತರೆ ಅರ್ಧ
ತಾಸಿನ ಶೋಕ. ಹೆಸರಿಗ೦ಬಲಿಸದ
ನಿಮ್ಮೀ ಸೇವೆಯೇ ಸಾರ್ಥಕ.

ನುಡಿಗಳಲೇ ನಮಿಸುವೆನು ನಿಮ್ಮಡಿಗಳಿಗೆ
ನನ್ನ ನಾಡಿನ ಯೋಧರೆ೦ಬ ನಿಮಗೆ.