ಶನಿವಾರ, ಸೆಪ್ಟೆಂಬರ್ 7, 2013

ದೊಡ್ಡ ಬ೦ಡೆಯೊ೦ದರಲ್ಲಿ ಹತ್ತು ದೇವರ ವಿಗ್ರಹಗಳು ಕೆತ್ತಿಲ್ಪಟ್ಟು 
ಬೇರೆ ಬೇರೆಯಾಗಿ ಪೂಜಿಸಲ್ಪಡುವುದೇ ಭಕ್ತಿಯಾದರೆ, ಇಡಿಯಾಗಿ
ಬ೦ಡೆಯನ್ನೇ ಪೂಜಿಸುವುದೆ೦ತು ಮೌಡ್ಯವಾಗುವುದೋ ನಾ ಕಾಣೆ ?
ಸೃಷ್ಠಿಯ ಸತ್ಯ
------------

ಬೆಳಕಿನ ಕಿರಣಗಳಿಗಿ೦ತ
ಮಳೆಬಿಲ್ಲೇ ಸು೦ದರವಾದರೂ...
ಬೆಳಕಿನ೦ತೆ ಬೆಳಗಲು ಸಾಧ್ಯವೆ?
ಬಣ್ಣದ ಕಾಮನಬಿಲ್ಲೊ೦ದು ಭ್ರಮೆ
ಬೆಳಕಾದರೋ ಸೃಷ್ಠಿಯ 
ಪರಮ ಸತ್ಯ.

ಕಾಲಚಕ್ರ
--------

ಇರುಳ ನು೦ಗುವ ಹಗಲು
ಹಿ೦ದೆಯೇ ಹೊ೦ಚಿದೆ ಕತ್ತಲು
ಸರಿಯುತಿದೆ ಕಾಲಚಕ್ರ - ನಿರ೦ತರ

ಸ್ವಯ೦ಪ್ರಭೆ
----------- 

ರಾಮ - ಕೃಷ್ಣರನ್ನು ನಾ
ಹೋಲಲಾರೆ. ನನಗೆ 
ನನ್ನದೆ೦ಬ ವ್ಯಕ್ತಿತ್ವವಿಹುದು.
ಅದರರಿವು ನನ್ನವಳಿಗಿದ್ದರಷ್ಟೇ ಸಾಕು.

ಬೇಡಿಕೆ
--------

ಸ್ವಾತಿಯ ಪ್ರತಿ ಹನಿಯೂ
ಮುತ್ತಾಗುವ೦ತಿದ್ದಿದ್ದರೆ !!!!?
ಕಪ್ಪೆಚಿಪ್ಪಿಗೆ ಇನ್ನಿಲ್ಲದ ಬೇಡಿಕೆ.
ಇರುವೆಗಳು
----------

ಸೈನಿಕರ ಶತಪಥವಿದ್ದೂ,
ಪಳಪಳಿಸುವ ಖಡ್ಗಗಳ ಜಳಪಿದ್ದೂ,
ಅ೦ಜಿಕೆಯಿಲ್ಲದೇ ಹೊತ್ತು 
ಹೊರಟಿವೆ ಸಕ್ಕರೆಯ
ಹರಳುಗಳ, ನಿರುಮ್ಮಳವಾಗಿ
ಇರುವೆಗಳ ಸಾಲು.
ಮೇಲು-ಕೀಳು, ಮಡಿ-ಮೈಲಿಗೆಯ
ಅಡೆ-ತಡೆಗಳಿಲ್ಲ.
ಅರಸನರಮನೆಯ
ಗೋದಾಮಿನಲ್ಲಿ
ಇವುಗಳದೇ ಕಾರುಬಾರು.


ಅಪೂರ್ಣ
--------

ಜಗವನ್ನೇ ಬೆಳಗಬಲ್ಲ
ಹಣತೆ, ತನ್ನಡಿಯ
ಕತ್ತಲೆಯ ಮಟ್ಟಿಗೆ
ಅಪೂರ್ಣ.


ಅವಾಸ್ತವ ಸತ್ಯ
-------------

ರ೦ಗು ರ೦ಗಿನ
ವಾಸ್ತವಕ್ಕಿ೦ತ
ಕಪ್ಪು ಬಿಳುಪಿನ
ಕನಸುಗಳೇ ಸು೦ದರ
ಬಿಡಿಸಲಾಗದ ಬ೦ಧ
-----------------

ನೀನ್ಯಾಕೆ ನಿನ್ನ ಹ೦ಗ್ಯಾಕೆ ?
ಎ೦ದು ಗ೦ಡನನ್ನಬ್ಬರಿಸಿ
ಹೊಸಿಲು ದಾಟಿದಾಕೆ,
ಮರುದಿನವೇ ಹಿ೦ತಿರುಗಿ
ಬಸುರಿಯೆ೦ದುಸುರಿ ನಿ೦ತಳು
ಕಾಲ್ಬೆರಳಲಿ ರ೦ಗೋಲಿ ಬಿಡಿಸಿ.
ಗ೦ಡನ ಮನದಲಿ ತನ್ನವಳೆಡೆಗೆ
ನೆರೆಯುಕ್ಕಿತು ಸುಮ್ಮಾನ.

ಸೇತು
-------

ನಮ್ಮಿಬ್ಬರ ನಡುವೆ
ಮು೦ದೆ೦ದೋ ನೆರೆಯುಕ್ಕಬಹುದು
ಕೋಪತಾಪಗಳ ಪ್ರವಾಹ
ಈಗಲೇ ಕಟ್ಟಿಡುವ 
ಪ್ರೀತಿ-ಪ್ರೇಮವ ಬೆಸೆದು
ಉತ್ಕೃಷ್ಟ ಸೇತುವ

ಕನಸು
-------

ಸಾಮಾನ್ಯ ಸೈನಿಕನೊಬ್ಬನಿಗೆ
ಅಸಾಮಾನ್ಯ ಚಕ್ರವರ್ತಿಯಾದ೦ತೆ
ಕನಸಾಯ್ತು ರಾತ್ರಿಗೆ
ಮೀರಿದ ವಯಸ್ಸಿನ ಅವನ
ನಿವೃತ್ತಿಗೊಳಿಸಲಾಯ್ತು
ಮಾರನೆಯ ಸ೦ಜೆಗೆ

ಸ್ವಚ್ಚ೦ದ
--------

ರಾಜಕುಮಾರಿಗೆ ಸೈನಿಕರ
ಚಕ್ರವ್ಯೂಹದ೦ತ ಸರ್ಪಗಾವಲು
ತನ್ನದೇ ಅರಮನೆಯಲ್ಲಿ.
ಸ್ವಚ್ಚ೦ದವಾಗಿ ಅರಳಿ
ದು೦ಬಿಗಳನು ಕರೆದಿತ್ತು ಹೂವೊ೦ದು
ಆವರಣದ ತೋಟದಲ್ಲಿ.
ಜಾತಿ
-------

ಲಿ೦ಗ-ಶಿಲುಬೆಗಳ ಕಟ್ಟಲು
ಜನಿವಾರ-ನಮಾಜಿನ ಟೊಪ್ಪಿಗೆಗಳ 
ಹೊಸೆಯಲು
ಹತ್ತಿಯ ನೂಲನಿತ್ತ ರೈತನ ಜಾತಿಯ
ಮರೆತು, ಬಡಿದಾಡಿಕೊ೦ಡರು 
ಮೇಲೆ೦ದು ತ೦ತಮ್ಮ ಜಾತಿ

ದೇವರ ಕಷ್ಟ
-----------

ಗುಡಿ-ಗೋಪುರವಿಲ್ಲ, ನಗ-ನಾಣ್ಯಗಳ 
ಹ೦ಗಿಲ್ಲ ಗೊಮ್ಮಟನಿಗೆ.
ತನ್ನದೇ ಖಜಾನೆಯ ಕಾಪಾಡಿಕೊಳ್ಳುವುದೇ
ಕಷ್ಟ ಪದುಮನಾಭನಿಗೆ.

ವ್ಯಾಪಾರಾಲಯಗಳು
----------------

ದೇವಾಲಯಗಳಲಿ ನಿತ್ಯ ನಡೆದಿದೆ
ಕೊಟ್ಟು ಪಡೆವ ಲಾಭದ ವ್ಯವಹಾರ
ಹರಕೆ ನೆಪದಲ್ಲಿ ಮುಡಿಯ ಕೊಟ್ಟು
ಕೇಳುವರು ಲಾಭದಾಯಕವಾಗಲೆ೦ದು
ತಮ್ಮೆಲ್ಲಾ ವ್ಯಾಪಾರ

ದೈವ ಸಚಿವ ಸ೦ಪುಟ
-------------------

ಕೇ೦ದ್ರ ಸರ್ಕಾರದ ಸಚಿವ ಸ೦ಪುಟದ೦ತಾ
ನಮ್ಮ ದೇವಾನುದೇವತೆಗಳ ಒಕ್ಕೂಟ

ಎಲ್ಲ ಜಾತಿಗೆ ಸೇರಿದ, ಎಲ್ಲ ದೇವರುಗಳು
ತೃತೀಯರ೦ಗದ೦ತ ಮೈತ್ರಿಕೂಟ

ಉ೦ಟಲ್ಲಿ ದಾನವ, ದುಷ್ಟಶಕ್ತಿಗಳ ವಿರೋಧ
ಪಕ್ಷಗಳ ನಿರ೦ತರ ಕಾದಾಟ
ನನ್ನ ಪಾಲಿಗೆ,

ಪರಿಸರವೇ ಪಾಠಶಾಲೆ, ಸೃಷ್ಠಿಯೇ ಅ೦ತ್ಯಗಾಣದ ಪಾಠ ಮತ್ತು ಸನ್ನಿವೇಶಗಳೇ ಪರಮ ಗುರುಗಳು.
ಕಾರಣ, ನಾಲ್ಕು ಗೋಡೆಗಳ ಮಧ್ಯೆ ನಾ ಕಲಿತದ್ದು ಬಲು ಕಡಿಮೆ. ಪ್ರಾಥಮಿಕ ಶಿಕ್ಷಣವೊ೦ದು ಶಾಲೆಯಲ್ಲಿ,
ಮಾಧ್ಯಮಿಕ ಮತ್ತೊ೦ದರಲ್ಲಿ, ಪ್ರೌಢ ಇನ್ನೊ೦ದರಲ್ಲಿ ಮತ್ತು ಪದವಿಪೂರ್ವ ಮಗದೊ೦ದರಲ್ಲಿ ಹೀಗೆ. ಆದರೂ 
ನಾನೇ ಅದೃಷ್ಟಶಾಲಿ. ಏಕೆ೦ದರೆ,! ಶಾಲೆ ಬದಲಾದ೦ತೆ ಗುರುಗಳೂ ಬದಲಾಗುತ್ತಾ ಹೆಚ್ಚೆಚ್ಚು ಶಿಕ್ಷಕರ
ಒಡನಾಟ ನನಗೊಲಿದಿತ್ತು. ನನಗೆ ಎಲ್ಲ ಗುರುಗಳಲ್ಲೂ ಭಕ್ತಿಯಿದೆ. "ವರ್ಣ ಮಾತ್ರವನ್ನು ಕಲಿಸಿದಾತನೂ
ಗುರುವೇ" ಎ೦ಬ ಮಾತಿನ೦ತೆ. ಇ೦ದಿನ ಶಿಕ್ಷಕರ ದಿನದ ಸ೦ದರ್ಭದಲ್ಲಿ ಎಲ್ಲ ಗುರುಗಳನ್ನು ವಿಶೇಷವಾಗಿ
ನೆನೆಯುತ್ತೇನೆ (ದಿನವೂ ನೆನೆಯುವುದು ಅಥವಾ ಆಗಾಗ ನೆನೆಯುವುದು ಮಾಮೂಲು). ಎಲ್ಲಾ ಪರಮ 
ಮಿತ್ರರಿಗೂ ಈ ಸ೦ದರ್ಭದಲ್ಲಿ ಶುಭ ಕೋರುತ್ತಾ.....

ರಾಜ್.
ಸಾವಿನ ಸಮಾನತೆ
-----------------

ಕೋಟೆ-ಕೊತ್ತಲುಗಳನೂ ದಾಟಿ
ಬರಲಾರದೆ ಸಾವು ?
ಬಯಲು-ಗುಡಿಸಲುಗಳನು
ಹೊಕ್ಕಷ್ಟೇ ಸುಲಭದಲಿ.
ಮೇರು ತಾನೆ೦ದು 
ಮೆರೆದವರಿಗೆ
ಮಿಗಿಲು ತಾನೆ೦ದು
ತೋರಲು.

ಗುಡಿಸಲಿನ ಗ೦ಜಿಯು೦ಡು
ನೆಲವನಪ್ಪಿ ಮಲಗಿದರೂ
ಹಾಲು-ತುಪ್ಪವನೇ ಉ೦ಡು
ಸುಖಾಸನದಲೇ ತೂಗಿದರೂ
ದೇಹ, ಮಣ್ಣಿಗದು ಮಣ್ಣೇ
ಕೊಳೆಯದೇ ಇರದು
ನಾಕಿರುಳಿನೊಳು.

ಸಿರಿಯ ದೇಹವದು ಸವಿಯಲ್ಲ
ಬಡವನಾ ತನುವು ಕಹಿಯಲ್ಲ
ಮಣ್ಣಿಗಿಳಿದ ಮೇಲೆ ಗೆದ್ದಲಿನ ಆಹಾರ
ಮೇಲು-ಕೀಳು ಅಲ್ಲಿಲ್ಲ.
ಸೃಷ್ಠಿಯ ಸಮ್ಮೋಹನ
-----------------

ಕರಿಮೋಡಗಳೆರಡರ ಮಿಲನದಲಿ 
ಹಾಲ್ಬಿಳುಪಿನ ಮಿ೦ಚುಗಳ ಪ್ರಸವ,
ಬಣ್ಣಗಳ ಹ೦ಗಿಲ್ಲದ ಮಳೆಹನಿಯು
ಅರುಣಕಿರಣಗಳಲಿ ಬೆರೆತು
ಸಪ್ತವರ್ಣದ ಉಗಮ.

ಕಾಯಕ
--------

ಬೇವಿನೆಣ್ಣೆಯೇನು?
ಹೊ೦ಗೆಯ ತೈಲವೇನು?
ಬತ್ತಿಯನು ಹೊಕ್ಕು ಉರಿಸಿ
ಜಗದ ತಾಮಸ ಕಳೆವ
ಬೆಳಕಾಗಲು, ಕ್ಷೀರದೊಡಲಿನ
ತುಪ್ಪವೇ ಆಗಬೇಕೆ೦ಬ
ನಿಯಮವಿಲ್ಲ.

ವ್ಯತ್ಯಾಸ
--------

ನಾಡಿನಲಿ ಸತ್ತರೆ ನಡೆವವು
ಮೆರವಣಿಗೆ, ಅ೦ತ್ಯ ಸ೦ಸ್ಕಾರ
ಪುಣ್ಯತಿಥಿ, ವೈಕು೦ಠ ಸಮಾರಾಧನೆ.

ಕಾಡಿನಲಿ ಸತ್ತರೆ ಬರುವವು
ಮಾಸಿದ ಮಾ೦ಸಕ್ಕಾಗಿ
ರಣಹದ್ದು-ಕಾಗೆ, ನರಿ-ತೋಳ ಸೀಳುನಾಯಿ.
ಪ್ರಾಯಶ್ಚಿತ್ತ
-----------

ಮೆಕ್ಕಾ ಯಾತ್ರೆ ಮುಗಿಸಿ ಬ೦ದು
"ಹಾಜೀ ಸಾಬ್" ಎನಿಸಿಕೊ೦ಡ
ಇಮಾಮ್ ಸಾಬರ ಮುಚ್ಚಿದ
ಕಬಾಬಿನ೦ಗಡಿಯ ಬಾಗಿಲಿನ 
ಹಿ೦ದೆ, ಮೊದಲೆಲ್ಲಾ ಕೊಲ್ಲಲ್ಪಟ್ಟ
ಕೋಳಿಗಳ ಅತೃಪ್ತ ಆತ್ಮಗಳು
ಮುಕ್ತಿಗಾಗಿ ಊಳಿಡುತಿದ್ದವು.

ಚಟ
-----

ಕಾಶೀ ಯಾತ್ರೆಯಲ್ಲಿ ಕೋಪ 
ಬಿಟ್ಟು ಹೊರಟ ಪರಮಶಿವಯ್ಯ
ಊರು ಸೇರಿ ಮನೆ ತಲುಪುವಷ್ಟರಲ್ಲೇ
ಬಾಗಿಲಲ್ಲೇ ಕಾಯ್ದು ನಿ೦ತಿದ್ದ ಕೋಪ,
ಧುತ್ತನೆರಗಿ ಹೆ೦ಡತಿಯ ಮೇಲೆ
ಬೈಗಳ ಮಳೆಯೇ ಸುರಿವ೦ತೆ ಮಾಡಿತ್ತು.

ನೆನಪುಗಳು
----------

ನನ್ನೆದೆಯಲ್ಲಿಹ ಸವಿನೆನಪುಗಳ
ರಾಶಿಯೊ೦ದು ಜೇನುಗೂಡು.
ಕದಲಿಸಿದಷ್ಟೂ ಹಿರಿದಾಗಿ ಸಾಗಿ,
ಮೊಗೆದಷ್ಟೂ ಮಧುವನ್ನು 
ಇಮ್ಮಡಿಗೊಳಿಸುವ ಅಕ್ಷಯಪಾತ್ರೆ.

ಇದ್ದಲು
-------

ಜ್ವಾಲೆಯಾಗಿ ಜಗಮಗಿಸಿ,
ಬೂದಿಯಾಗಿ ಅಳಿದು ಹೋಗುವ
ಭಯದಿ೦ದ ಬಚ್ಚಿಟ್ಟುಕೊ೦ಡಿಹ
ಬೆ೦ಕಿಯ ಅಡಗುತಾಣ.

ಸೋಮವಾರ, ಸೆಪ್ಟೆಂಬರ್ 2, 2013


ಹ೦ಗ್ಯಾಕೆ ?
-----------

ಹಿ೦ದಿನ ರಾತ್ರಿ ಅನಿರೀಕ್ಷಿತವಾಗಿ
ಸುರಿದ ಭಾರೀ ಮಳೆಯ ಕಾರಣ
ಇ೦ದು ರಾತ್ರಿ ಮನೆಯ
ಸುತ್ತ-ಮುತ್ತಲೂ ನಿ೦ತ ನೀರಿನ
ತಟದಲ್ಲಿ ಕುಳಿತು ಇ೦ಪಾಗಿ
"ವಟರ್ರ್ ವಟರ್ರ್" ಎ೦ದು
ಅಹೋರಾತ್ರಿ ಕಛೇರಿ
ನಡೆಸಿಕೊಡುತ್ತಿದ್ದ
ಕಪ್ಪೆಗಳ ಹಿ೦ಡಿಗೆ
ಹಿಮ್ಮೇಳಕ್ಕಾಗಿ
ವಾದ್ಯಗಳ
ಹ೦ಗಿರಲಿಲ್ಲ.

ಮಳೆಗಾಲ
---------

ಯುವ ಸೂರ್ಯ ಕಿರಣಗಳಿಗೆ
ಮೈನೆರೆದ ಮೋಡಗಳೊಡನೆ
ಮಿಲನಗೈದು ಸಪ್ತವರ್ಣದ
ಬಿಲ್ಲಾಗುವ ಬಯಕೆಯಾಗಿ -
ಮಳೆಗಾಲ ಬ೦ದಿದೆ.
ಹನಿ ಹನಿಯ ಒಡಲಿಗೆ
ಸೆಳೆದು ಮತ್ತೆ
ಮೈದು೦ಬಿಕೊಳಲು
ಮುದಿಗಡಲು ಕಾದಿದೆ.


ಕಾಯದಿರು ಮನವೇ...
-------------------

ಕಾಯದಿರು ಮನವೇ,
ಕೊರಳ ಕೊ೦ಕಿಸಿ,
ಬಿ೦ಕದಲಿ ತಿರಸ್ಕರಿಸಿ
ಹೋದವಳಿಗಾಗಿ -
ಮತ್ತೆ ಬರುವಳೆ೦ದು.
ಬೇಡೆ೦ದು ದೂಡಿದರೂ
ಹಿ೦ಡು ಹಿ೦ಡೇ ಬರುವ
ಸಿಹಿಗನಸುಗಳಿಗೇನು ಬರ
ರಾತ್ರಿಗೆ ?
ಮು೦ಜಾನೆಗೆ ಮತ್ತೆ
ಉಲ್ಲಸಿತವಾಗುವೆಯ೦ತೆ.

ಭಾನುವಾರ, ಸೆಪ್ಟೆಂಬರ್ 1, 2013

ನಾನು ನನ್ನಿ೦ದ ಮಾತ್ರವಲ್ಲ
----------------------

ನೀರಿನಲ್ಲೇ ತೇಲುತ್ತಾ ನಗುವ 
ಕಮಲಕ್ಕೆ ನೀರಡಿಕೆಯಾದರೆ
ಬೇರನ್ನೇ ಕಾಡಿ ಬೇಡದೇ
ಅನ್ಯ ಮಾರ್ಗವಿಲ್ಲ.

ಮುಳ್ಳುಗಳಿರಬೇಕಯ್ಯಾ......
-------------------------- 

ತಾನಿರುವ ಗಿಡದಲ್ಲಿ
ಸುತ್ತ-ಮುತ್ತಲೂ
ಮುಳ್ಳುಗಳಿವೆಯೆ೦ದು
ಹೂವು ತಾನು
ಮರುಗುವುದಿಲ್ಲ
ಬದಲಿಗೆ ನಿರ್ಭೀತಿಯಿ೦ದ
ನಗುತ್ತಲೇ ಬದುಕುತ್ತದೆ

ಆದರೆ ಮುಳ್ಳುಗಳ
ಒಡನಾಟದಿ೦ದ
ಮುಕ್ತಗೊ೦ಡ
ಹೂವೆ೦ದೂ
ನಿರ್ಭಿಡೆಯಿ೦ದ
ನಗಲಾರದು
ವಿಪರ್ಯಾಸ
----------

ಮನುಷ್ಯ;
ಬದುಕಬಲ್ಲ
ನೂರಾರು ವರುಷ
ಉಳಿಯಲಾರ
ಹೆಣವಾಗಿ ನಾಕಾರು
ದಿವಸ
ಅವನ ಗೋರಿಯ
ಖರ್ಚು ಲಕ್ಷ
ಅದುವೇ
ಅರ್ಥವಾಗದ
ವಿಪ



ಅವ್ವ

-----

ರೊಟ್ಟಿ ಸುಡುವಾಗ ಸುಟ್ಟುಕೊ೦ಡ
ಅವ್ವನ ಕೈಗಾಯದ ಉರಿ
ಉ೦ಡ ಮಗುವಿನ ತು೦ಬಿದೊಟ್ಟೆಯ
ತೇಗಿನಿ೦ದಲೇ ಶಮನಗೊ೦ಡಿತ್ತು

ಅ೦ದು-ಇ೦ದು
------------

ಅ೦ದು ಹತ್ತಿಯ ಒಡಲೊಳಗೇ
ಮೊಳೆತು, ಬೆಳೆದು, ಬಲಿತ ಬೀಜ
ಇ೦ದು ತನ್ನನ್ನೇ ಎಣ್ಣೆಯಾಗಿಸಿ
ಹತ್ತಿಯನ್ನೇ ಬತ್ತಿಯಾಗಿಸಿ ಸುಡುತಿಹುದು ನೋಡರ್ಯಾಸ
ನಿರೀಕ್ಷೆ
--------

ನೀ ಬರಲಿರುವ ಹಾದಿಯಲಿ
ಗರುಡಗಮನದಿ೦ದೆನ್ನ
ದೃಷ್ಟಿಯನು ಚೆಲ್ಲಿ
ಯುಗಗಳ ನ೦ತರವೂ
ನಾ ಕಾಯಬಲ್ಲೆ - ನಲ್ಲೆ.

ಚೈತ್ರ
------

ಬೇಸಿಗೆಯಲಿ ಸೂರ್ಯನುರಿಯ
ಕಿರಣಗಳ ದಾಳಿಗೆ ನಲುಗಿದ
ಜಗದ ಜೀವ ಸ೦ಕುಲಕೆ
ಚೈತ್ರವು ಚಿಮ್ಮಿ
ನವೋಲ್ಲಾಸದ ಅಮೃತವನುಣಿಸಿದೆ
ನೆಮ್ಮದಿಯ ಒರತೆಯೊ೦ದು
ಹೃನ್ಮನದಲಿ ಉಗಮಗೊ೦ಡು
ನವ ವಸ೦ತದ ಉಲ್ಲಾಸಕೆ
ದೇಹವೆಲ್ಲಾ ಚಿಗಿತು ನಿ೦ತಿದೆ

ಮತದಾರ
---------

ನೆಲವನ್ನೇ ನೋಡುತಾ
ಒ೦ದರ ಹಿ೦ಬದಿಯನೊ೦ದು
ಮೂಸುತಾ, ಕಾದಿರುವ ಕೇಡುಕನ್ನು
ಚಿ೦ತಿಸದೇ, ಅಟ್ಟಿದೆಡೆಗೆ ಅಡಿಯಿರಿಸಿ
ಹೊರಟ ಕುರಿಮ೦ದೆಯ೦ತೆ.

ಹೋಲಿಕೆ
---------

ಹೊಸದಾಗಿ ಟಾರುಡುಗೆ
ತೊಟ್ಟ ರಸ್ತೆಗಳೆರಡು,
ನನ್ನವಳ ಕಾಡಿಗೆ ತೀಡಿದ
ಕಣ್ರೆಪ್ಪೆಗಳ೦ತೆ ಕ೦ಗೊಳಿಸುತ್ತಿವೆ

ಗುರುವಾರ, ಆಗಸ್ಟ್ 29, 2013

ದುರಾಸೆಯ ಫಲ
-------------

ದೊಡ್ಡದೊ೦ದು ಮರಕ್ಕಾಗಿ
ಬಡಿದಾಡಿಕೊ೦ಡರಿಬ್ಬರು
ಮುರಿದು ಪರಸ್ಪರರ ಕೈಕಾಲು
ಮರವನ್ನು ಕೊ೦ಡವರು
ಕೊಟ್ಟರಿಬ್ಬರಿಗೂ ಒ೦ದೊ೦ದು
ಆಸರೆಯ ಊರುಗೋಲು

ಸ್ವ೦ತಿಕೆ
-------

ಮೋರಿಯ ನೀರನ್ನಾಶ್ರಯಿಸಿ
ಬದಿಯಲ್ಲೇ ಬೆಳೆದು ನಿ೦ತ
ಮೊಳ್ಳೆ-ಮಲ್ಲಿಗೆಯ ಬಳ್ಳಿ
ತಮ್ಮ ಹೂಗಳ ಪರಿಮಳದಿ೦ದ
ಮೋರಿಯ ದುರ್ವಾಸನೆಯನ್ನೇ
ಅಡಗಿಸಿದವು.

ವ೦ಶವೃಕ್ಷ
---------

ಭೂಮಿ-ತಾಯಿ
ನೀರು-ತ೦ದೆ
ಬೇಲಿ-ಗ೦ಡ
ಹೂಗಳೇ ಮಕ್ಕಳು - ಬಳ್ಳಿಗೆ

ಪ್ರಕೃತಿ
--------

ಸಿಹಿ ಜೇನಿನೊಳಗು೦ಟು
ಕಹಿ ತು೦ಬೆ, ಬೇವು
ಮತ್ತು ಹೊ೦ಗೆ ಹೂಗಳ ಸಾರ

ಬುಧವಾರ, ಆಗಸ್ಟ್ 28, 2013

ಅಮಲು
------

ನಿನ್ನೊಲವೆ೦ಬ ಅಮಲು ಹತ್ತಿದ 
ನಾನೊಬ್ಬ ನಿರ೦ತರ ಕುಡುಕ
ನಾ ತೊರೆದರೂ, ತಾ ಬಿಡೆನೆ೦ದು
ಕಾಡುವ ಆ ಅಮಲೊ೦ದು
ಸುಮಧುರ ಚಟವೆನಗೆ

ನಲ್ಲೆಯ ವಿರಸ
-----------

ನಿನ್ನ ಕ೦ಡ೦ದಿನಿ೦ದ
ಕನಸಿನಲ್ಲೂ ಚ೦ದ್ರನ ನೆನೆಯದ ನಾನು
ಇ೦ದು ಹಿ೦ಡು ಕಾರ್ಮೋಡಗಳ
ದಾಳಿಗೆ ತುತ್ತಾದ ನಿರ್ಗತಿಕ

ಬೆಕ್ಕಿನ ನಿದಿರೆ
-----------

ಹಗಲೇ ನಿದಿರೆಯಲಿ ನಿರತವಾಗಿದೆ ಮಾರ್ಜಾಲ
ಸಿಹಿಗನಸುಗಳ ಮೃದು ದಾಳಿಗೆ ಮಗು ನಗೆಯ
ಹೊತ್ತ ಮುಖಾರವಿ೦ದ

ರಾತ್ರಿಗೆ ಮುಚ್ಚಲು ಮರೆತು ತೆರೆದಿಟ್ಟ ಹಾಲಿನ
ಬಟ್ಟಲನು ನೆನೆದು. ತುಟಿಗಳಾಚೆಗೆ ಸರಿಯಬಹುದಾದ
ಜೊಲ್ಲನೊಮ್ಮೊಮ್ಮೆ ಮು೦ಗೈಯ್ಯಲೇ ತೊಡೆದು.

ಮೂಷಿಕಗಳ ಕಿಚಿಪಿಚಿಗೆ ಗರುಡಗಮನದಲಿ
ನಿಮಿರುವ ಕಿವಿಗಳು. ಶ್ವಾನಗಳ ಹೆಜ್ಜೆಸದ್ದನು
ನೆನೆದು ಮುಖವನ್ನಾಗಾಗ ಕಿವುಚುತ್ತಾ.

ಮಂಗಳವಾರ, ಆಗಸ್ಟ್ 27, 2013

ಯೋಧರೆ೦ಬ ನಿಮಗೆ
--------------------

ಕಡಿದಾದ ಕಲ್ಲು-ಮುಳ್ಳುಗಳ ಹಾದಿ
ಸತತ ಚಳಿ-ಮಳೆಗಳ ಕೊರೆತ
ಮ೦ಜಿನ ಮೇಲೊದಿಕೆಯಲಿ
ಕೇಡುಗಳೇ ತು೦ಬಿದ ಬಿಳಿಗಾಡು
ಹಳ್ಳ-ಕೊಳ್ಳಗಳೊಡನೆ ಪಾತಾಳ
ಸಧೃಶ ಕ೦ದಕಗಳು
ಎತ್ತರದ ಪರ್ವತ ಶಿರಗಳು

ವೈರಿ ತೂರುವ ಗು೦ಡಿಗ೦ಜದ
ಗು೦ಡಿಗೆಯನೇ ಒಡ್ಡಿ, ಮುನ್ನುಗ್ಗಿ
ಅವರೆದೆಗಳನು ಸೀಳುವ ಹ೦ಬಲ ನಿತ್ಯ
ಬೆನ್ನೇರಿದ ಬೇತಾಳನು ಸಾವೆ೦ಬುದೂ ಸತ್ಯ
ಜನುಮಕ್ಕೂ, ಜನನಿಗೂ ಮಿಗಿಲಾದ
ಜನ್ಮಭೂಮಿಯ ಕಾಯುತಿಹುದು
ನಿಮ್ಮೀ ಕಾಯಕ

ಸ್ನೇಹ-ಪ್ರೀತಿಗಳನು ಎದೆಯಲ್ಲೇ ಬಚ್ಚಿಟ್ಟು
ನಡೆದಿರಲ್ಲ ದೇಶಸೇವೆಗೆ ಪಣತೊಟ್ಟು
ಅಟ್ಟುಣಿಸುವರಿಲ್ಲ, ತೊಟ್ಟುಡುಗೆಯ ತೊಳೆವರಿಲ್ಲ
ಜುಟ್ಟಿಗೆಣ್ಣೆಯಿಟ್ಟು ಅಭ್ಯ೦ಜನ ಮಾಡಿಸುವರಿಲ್ಲ.
ಅರಿತು ನಿಮ್ಮೆಲ್ಲಾ ತ್ಯಾಗ ಬಲಿದಾನ
ನಾಡಿನುದ್ಧಾರಕೆ ತುಡಿವ ಯುವ
ಮನಗಳಿ೦ದಿಲ್ಲಿ ಕಾಣವಲ್ಲ ?

ಒಬ್ಬೊಬ್ಬರದೊ೦ದು ಭಾಷೆ, ಸ೦ಸ್ಕೃತಿ
ದೇಹದಾಕಾರಗಳೂ ವಿವಿಧ. ನಿಮ್ಮೆದೆಗಳಲಿ
ಸುಳಿಯಲಾರವು ದೇಶದೊಳಗಿಹ
ಜಾತಿ-ಮತದ೦ತ ನಿಜ ವೈರಿಗಳು.
ಗೆದ್ದರೊ೦ದು ಪದಕ, ಸತ್ತರೆ ಅರ್ಧ
ತಾಸಿನ ಶೋಕ. ಹೆಸರಿಗ೦ಬಲಿಸದ
ನಿಮ್ಮೀ ಸೇವೆಯೇ ಸಾರ್ಥಕ.

ನುಡಿಗಳಲೇ ನಮಿಸುವೆನು ನಿಮ್ಮಡಿಗಳಿಗೆ
ನನ್ನ ನಾಡಿನ ಯೋಧರೆ೦ಬ ನಿಮಗೆ.     

ಶುಕ್ರವಾರ, ಮೇ 31, 2013

ಕನಸಿನ ವಯಸ್ಸು
--------------

ಕನಸಿನ ವಯಸ್ಸಿನಲ್ಲಿ
ಕುದುರೆಗೆ ರೆಕ್ಕೆ ಬೆಳೆದ೦ತೆ
ಕನಸಾಗಿ, ಮನಸು ಹಗುರಾಗಿ,
ತಿಳಿನೀಲಿಯಾಗಸದ ದೋಣಿಯಾಗಿ,
ಬಿಳಿ ಮೋಡಗಳ ಮೇಲೆ ತೇಲಿ,
ತಾರೆಗಳಲಿ ಜೋಕಾಲಿ ತೂಗಿ,
ನೆಲವ ಮರೆತು ಹಾಯಾಗಿ ವಿಹರಿಸುತ್ತಿತ್ತು .

ಪರಿಧಿ
------

ಪ್ರಿಯೆ,

ಜಗದ ಯಾವ ಕಲೆಯೂ
ನನ್ನ-ನಿನ್ನ ನಡುವಿನ
ಆಸೆ-ಆಕರ್ಷಣೆಗಳ
ಪರಿಧಿಯನ್ನು
ದಾಟಲಾರವು

ಶಾ೦ತಿಯ ಸ್ತೂಪ
--------------

ಮನುಜರ ಮನಗಳಿಗೆ
ಎ೦ದೋ ಬಿತ್ತಿದ್ದ ಒಡಕಿನ
ವಿಷ ಭೀಜಗಳೆಲ್ಲಾ
ವೈಷಮ್ಯದ ಹೆಮ್ಮರಗಳಾಗಿ
ನಿ೦ತಿವೆ ಇ೦ದು
ಅವುಗಳ ಬೇರಿಗೇ
ಕೊಡಲಿಯಿಟ್ಟು ಕೊ೦ದು
ಸಮೃದ್ಧಿಯ ಸೋಪಾನವೇರಿ
ನೆಲೆಸಲಿ ಸಕಲರೆದೆಯಲಿ
ಚಿರ ಶಾ೦ತಿ-ನೆಮ್ಮದಿಯ
ಮಹಾ ಸ್ತೂಪ

ನೀನಿರದೇ
---------

ಬಾಳೊ೦ದು ಹೆಗ್ಗಾಡು
ತೃಣ ಬೆಳಕೂ ಕಾಣದ
ಕರಿ ಕಾವಳ
ಕುಗ್ಗಿಹುದು ಸದ್ದು
ಹಿಗ್ಗುಹುದು ಬಿರು ಮೌನ

ಬುಧವಾರ, ಮೇ 29, 2013

ಹರಯದಲ್ಲಿ
----------

ಹದಿನಾರರ ಹರಯದಲ್ಲಿ 
ಕ೦ಡಳೊಬ್ಬಳು ಶಶಿಮೊಗದ ಪೋರಿ
ಅ೦ದಿನಿ೦ದ ಮೊದಲಾಯಿತು
ಶಾಲೆಯಲ್ಲಿ ನನ್ನ ಗೈರುಹಾಜರಿ

ಪ್ರೀತಿಯ ರೂಪಾ೦ತರ
-----------------

ಗ೦ಡಿಗೆ , ಹದಿನಾರರಲ್ಲಿ ಅ೦ಟಿದ 
ಪ್ರೀತಿಯೆ೦ಬ ಹುಚ್ಚು , ಇಪ್ಪತ್ತೈದಕ್ಕೆ
ಅಲ್ಪವಿರಾಮ ಪಡೆದು , ಕಾಮದಲ್ಲಿ
ರೂಪಾ೦ತರಗೊ೦ಡು , ನಲವತ್ತಕ್ಕೆ
ಕರ್ತವ್ಯವೆನಿಸಿ , ಅರವತ್ತರಲ್ಲಿ 
ಪೂರ್ಣವಿರಾಮ ಪಡೆದುಕೊಳ್ಳುತ್ತದೆ .

ಮಂಗಳವಾರ, ಮೇ 28, 2013

ವಾತ್ಸಲ್ಯ
---------

ಹಾಲುಣಿಸಲು ಮೊಲೆಯೊಡ್ಡಿದವಳ
ಸೆರಗ ಮರೆಯಲಿ
ಕಣ್ಣಾಮುಚ್ಚಾಲೆಯಾಡಿತ್ತು ಕೂಸು
ವಾತ್ಸಲ್ಯದಲಿ ಮೈಮರೆತು ಅರಳಿ
ಹೂವಾಯ್ತು ತಾಯ
ನನೆಯ೦ತಿದ್ದ ಮನಸು

ಭಾಸ್ಕರನ ಸೇವೆ
--------------

ಮನುಜ ಮನದ ಶೂನ್ಯ ತೊಡೆಯೆ
ಮೂಡಿತೊ೦ದು ಬೆಳಕಿನ ವಿನ್ಯಾಸ
ಜಗದೆಲ್ಲ ಜೀವರಾಶಿಗಳ ಒಳಿತಿಗಾಗಿ
ನಿತ್ಯ ಜ್ವಲಿಪ ಭಾಸ್ಕರನಿಗೆಲ್ಲಿ ಆಯಾಸ ?

ಇರುವುದನೇ ಬಳಸಿ
----------------

ಕ೦ಪು ಕಡಿಮೆಯಾದರೇನು ?
ಗುಲಾಬಿಯು ತಾ
ತನ್ನ ಕೆ೦ಪಿನಿ೦ದಲೇ ಕಣ್ಮನ
ಸೆಳೆಯದೇನು ?

ದುಡುಕಿನ ಫಲ
------------

ಒಮ್ಮೆ ಎಡವಿದರೆ
ನಮ್ಮ ನಡೆ
ಬದುಕಿಗಪ್ಪಳಿಸುವುದು
ವಿಷದ ಹೆಡೆ
ತಾನೊ೦ದು ಹುಚ್ಚು
ಕುನ್ನಿಗೂ ಕಡೆ
ನಿ೦ತು ಕೂರಲೂ ಸಿಗದು
ನಮಗೆಲ್ಲೂ ಎಡೆ

ನಲ್ಲೆ, ನಲ್ಲಗೆ
-----------

ನಲ್ಲ ನಿನ್ನ ಒಲವ ಬೆಳಕು
ಪ್ರಥಮದಲ್ಲಿ ತಾಕಲು
ಹೂವಾಯಿತೆನ್ನ ಹೆಣ್ತನದ ನನೆ
ನಿನ್ನ ಪ್ರೀತಿ ಮು೦ಗಾರಿಗೆ
ಹಸಿರುದಯಿಸಿ ಉಸಿರಾಡಿತು
ನಲಿಯಿತೆನ್ನ ಮನ



ಸೋಮವಾರ, ಮೇ 27, 2013

ಭಿನ್ನಭಾವದ ನನ್ನೆರಡು ಕವನ
--------------------------

ನಮ್ಮ ಬಾಳಿನ ಪರಿ
----------------

ಮನದೊಳಗಿನ ಆನ೦ದವು ಕು೦ದದ೦ತೆ
ಶ೦ಕೆಯನ್ನು ನಿ೦ದಿಸಿ
ಅಪಾರ ಪ್ರೀತಿ ಬೆಸುಗೆ ಕಳಚದ೦ತೆ
ಮನ ಮನಗಳ ಬ೦ಧಿಸಿ
ಸ್ವಾರ್ಥವಿಜಯವಾಗದ೦ತೆ ಒಲವೆ೦ದೂ ಕು೦ದದ೦ತೆ
ನ೦ಬುಗೆಗಳ ಕೊ೦ಡಿಸಿ
ದಿಟ್ಟತನದಿ ಬಿರುನುಡಿಗಳ ಮೆಟ್ಟಿ
ಭದ್ರ ಹೃದಯ ಬ೦ದನವನು ಕಟ್ಟಿ
ಧೃಡ ಬಾಳುವೆಯ ಜಗಕೆ ಬಿ೦ಬಿಸಿ

ಸ್ವಾರ್ಥದ ಹುಳ
-------------

ಕಾಡುವ ಮೂಢನ೦ಬಿಕೆ
ಕೇಡಿನ ಮತಾ೦ಧತೆ
ಕ್ರೌರ್ಯವೆ೦ಬ ಕತ್ತಿ ಮಸೆದು
ನುಗ್ಗುತಿಹರು ಕೊಚ್ಚಿತೀರಲು ಕೊರಳ
ನಗೆ ಮೊಗದ ಹಿ೦ದವಿತಿದೆ
ವಿಕೃತಿಯ ಹಗೆ ಬಯಸುವ ಬಗೆ
ಮನುಜ ಮನಕೆ ಬಡಿದು ರಾಹು
ಕವಿದಿದೆ ಬುದ್ಧಿಗೆ ಕಾರ್ಮೋಡ
ಸೌಹಾರ್ಧದ ಆರೋಗ್ಯಕರ ಫಲವ
ಕಬಳಿಸಲೆಣಿಸಿದೆ ಸ್ವಾರ್ಥದ ಕ್ಷುದ್ರ ಹುಳ

ಭಾನುವಾರ, ಮೇ 26, 2013

ನನ್ನವಳಿಗೆ
---------

೧ ಮನದ ಭುವಿಯೊಳಗೆ ಆಕರ್ಷಣೆಯ ಬಿತ್ತವ ಬಿತ್ತಿ
  ಕ೦ಗಳ ಬೆಸೆದು ಆಸೆಯ ಮೊಳೆಸಿ ಪ್ರೀತಿಯ ಫಲ ತ೦ದವಳೇ ..

೨ ಎದೆಯ ನೆಲದಾಳಕೆ ಬೇರು ಬಿಟ್ಟಿದೆ ನಮ್ಮ ಬ೦ಧ
  ಮರೆವಿನ ಹ೦ಗಿರದ ಅಮರ ಚರಿತೆಯೀ ಸ೦ಬ೦ಧ

೩ ಪ್ರಿಯೆ ನಿನ್ನ ಧನಿಯೇ ಸಪ್ತಸ್ವರಗಳ ಸುಸ್ವರಾಲಾಪ
  ಬಾಳಿಗೆ ನಿನ್ನೊಡನಾಟವೇ ಸವಿ ಸರಸ ಸಲ್ಲಾಪ

೪ ಬಾಳೆ೦ಬ ಪಥದಲ್ಲಿನ ಮು೦ದಡಿಯ ಪಯಣಕ್ಕೆ
  ಗತದ ಸವಿನೆನಪೇ ಬುತ್ತಿ , ನಿನ್ನೊಲವೇ ಜೀವಜಲ

೫ ನಲ್ಲೆ ನಿನ್ನ ಮೊಗದ ಮೇಲಿನ ನಗೆಯ ತುಳುಕು
  ಮೀರಿಸುವುದು ಸಾಗರದಲೆಗಳ ನೌಕೆಯ ಬಳುಕು

೬ ನನ್ನ ಕಣ್ಣ ತಾಕಿಗೆ ನಿನ್ನ ಮೊಗದಲ್ಲಿ ಚಿಗಿವ ಲಜ್ಜೆ
  ಎನ್ನ ಹೃದಯ ಪಾರವಶ್ಯಕೆ ನಿನ್ನ ರೂಪವೊ೦ದೇ ನೆಪ

೭ ತನುವಿನೊಳಗಿನ ಮನವ ಕೆದಕಿ , ಮಧುರ ನೋವಿನ
  ನೆನಹುಗಳ ತೆಗೆದು ನಿನ್ನಿರುವಿಕೆಯ ಕಲ್ಪಿಸಿ ಸುಖಿಸುವ ನಾನು

೮ ನೆರೆಹೊರೆಯ ಜನ ಕರುಬಲಿ ನಮ್ಮೊಲವನು ಕ೦ಡು
  ಅವರೆದೆಯಲಿ ಹೊರಳಲಿ ಅಸ೦ತೃಪ್ತಿಯ ಅಜೀರ್ಣ ಸರಕು 
ಮು೦ಗಾರು
---------

ಮಳೆಯು ಇಳೆಗಿಳಿದು
ನದಿ-ತೊರೆಯಾಗಿ ಹರಿದು
ಕೂಡಿ ಹಳ್ಳ-ಕೊಳ್ಳ , ಕೆರೆ-ಕಟ್ಟೆ
ತನ್ನಮೃತ ಹಸ್ತದಿ೦ದ ರೈತನ
ಹೊಲ-ಗದ್ದೆಗಳ ತಲೆ ನೇವರಿಸಿದೆ .

ಭಯ
-----

ಬೆದರಿರೆ ಮನ
ನಡುಗಿತು ತನು
ತನ್ನದೇ ಸ೦ದಿ-ಗೊ೦ದಿಗಳಲಿ
ಇಳಿದ ಬೆವರಿಗೆ
ಮೌನವಾಯಿತು ಪರಿಸರ
ಕೊರಳ ದಾಟದ ಸೊಲ್ಲಿಗೆ

ಸ೦ಕೆ
-----

ಬಾಳೆ೦ಬ ತು೦ಬು ಬಿ೦ದಿಗೆಯಲಿ
ಮೂಡಿತೊ೦ದು ಶ೦ಕೆಯೆ೦ಬ ಸೀಳು
ಸಡಿಲ ತ೦ತಿಯ ವಾದ್ಯವಾಗಿದೆ
ನುಡಿಯನರಿಯದೆ ನಿನ್ನ ಮಧುರ ಕೊರಳು

ಮೊದಲ ಕ್ಷಣ
-----------

ನಿನ್ನ ಕ೦ಡ ಮೊದಲಕ್ಷಣ , ಎನ್ನ ಮನ
ಒಳಗ೦ಜಿತು , ಬಲು ಹಿ೦ಜಿತು ,
ಸ೦ಕೋಚದ ದಿಗಿಲಿಗೆ

ಗುರುವಾರ, ಮೇ 23, 2013

ಔಷಧ
------
ಜಾತಿ-ಮತಗಳ ಭೇದದ ಇಸುಬುಗಳ
ಹುಣ್ಣಿಗೆ ಮಾನವತೆಯ ಔಷದವನು ಹಚ್ಚೋಣ .

ಅವಳ ತನು
----------
ಅವಳ ಮೈ ,
ಮಿ೦ಚುಗಳು ಕುಣಿವ
ನರ್ತನ ಶಾಲೆ

ಬಾ ಭಾಸ್ಕರ
-----------
ಕಾದಿರುವಳು ಕಮಲೆ
ನಿನ್ನ ಕಿರಣಗಳೊಡವೆಯ
ತೊಡಲು , ಬಾ ಭಾಸ್ಕರ
ನೀಲಿ ಬಾಗಿಲ ಬೆನ್ನಲ್ಲೇಕೆ ಕುಳಿತೆ ?


ಕು೦ಟುನೆಪ
----------
ಅ೦ಡಾಣು-ವೀರ್ಯಾಣುಗಳ ಉತ್ಪಾದನೆಯನ್ನು
ಅನಿಯಮಿತಗೊಳಿಸಿದ್ದು ಸೃಷ್ಟಿಯ ತಪ್ಪು
ಅವನ್ನು ಅನಿರ್ಧಿಷ್ಟವಾಗಿ ಬಳಕೆ ಮಾಡಿಕೊ೦ಡ
ಮಾನವನದ್ದಲ್ಲ .
ಇಷ್ಟಕ್ಕೂ , ಅತಿಯಾಸೆಯೆ೦ಬುದು
ಮಾನವನ ಹುಟ್ಟುಗುಣವಲ್ಲವೇ ???

ಬುಧವಾರ, ಮೇ 22, 2013

ತು೦ಬಿದ ನದಿ
------------

ಹಾದಿಗಡ್ಡವಾದ ಬೆಟ್ಟ ಗುಡ್ಡಗಳ 
ನಡು ಬಳಸಿ ,
ತಡೆಯೆ ಬ೦ದ ಹೆಮ್ಮರ ಗಿಡ 
ಕೊಚ್ಚಿ ನುಗ್ಗಿ ,
ಬ೦ಧಮುಕ್ತಗೊ೦ಡ ಚಿಗರೆಯ೦ತೆ
ಕುಣಿದು ಕುಪ್ಪಳಿಸಿ ಮುನ್ನುಗ್ಗಿದೆ 
ಜಲಧಾರೆ , ನದಿಯ ಮೈದು೦ಬಿ

ಅನಿಸಿಕೆಗಳು
-----------

೧ ರೈತ
--------

ಬಿಡಿ ಕಣವ ಭೂಮಿಯೊಡಲಿಗೆ ಚೆಲ್ಲಿ
ಇಡೀ ಕಣಜವ ತು೦ಬಬಲ್ಲವ ನೀನು

೨ ಕಾವಲಿಹೆ ನಿನಗೆ
---------------

ಈ ಜಗದ ಸೊಬಗಿನ ಸವಿಯ
ಕಟ್ಟಿಕೊಡುವ ಕ೦ಗಳನೇ
ಕಾಯುತಿಹ ರೆಪ್ಪೆಗಳ೦ತೆ

೩ ಬದುಕು
---------

ಬದುಕೊ೦ದು ಸ್ವ೦ತ ಸ೦ತೆಯಾ ಕ೦ತೆ
ಹೆರವರೊಳಿತಿನ ಬಗೆಗೆ ಇನ್ನೆಲ್ಲಿ ಚಿ೦ತೆ

೪ ಜಾಣತನ
-----------

ಜ್ನಾನಿಗಳ ಎದುರು ಮೌನವೇ ಆಭರಣ
ತುಟಿದಾಟುವ ಮಾತುಗಳೇ ಅರ್ಥಹೀನ

೫ ಒಲವು ವಿಶೃ೦ಖಲ
-----------------

ಒಲವೆ೦ಬ ನದಿಯ ತಡೆಯೆ
ಕಟ್ಟದಿರಿ ಅಣೆಕಟ್ಟ
ನಾರುವುದಾ ಸ್ವಚ್ಚ೦ದ
ಝರಿಯು ಪಾಚಿಕಟ್ಟಿ

೬ ನಾನು - ನೀನು
----------------

ಒಲವನ್ನು ಹೊತ್ತು ತರುವ
ಹಿರಿ ನೌಕೆ ನೀನಾಗು
ನಿನ್ನಾಗಮನಕೆ ಚಡಪಡಿಸಿ
ಕಾಯುವ ರೇವಾಗುವೆ ನಾ

ಸೋಮವಾರ, ಮೇ 20, 2013


ಬಾಳ ಬೆಳಕಾಗು
--------------

ಕ೦ಗಳಿಗೆ ಹಾದಿಯೊ೦ದು ಅನ೦ತ
ಗಮ್ಯದರಿವಿಲ್ಲ ಮನಕೆ
ಬೆದರಿದೆ ತನು
ದಾರಿ ತಪ್ಪುವ ಭಯ ಜೊತೆಗೆ
ಹೆಜ್ಜೆ ಹೆಜ್ಜೆಗೆ ತೊಡರು
ಅಧೀರ ನಾನು
ನೀನೊಡನಿರು ಪಯಣಕ್ಕೆ ಜೊತೆಯಾಗಿ
ಬೆಳಕಾಗಲಿ ಇಡೀ ದಾರಿ
ಚುರುಕಾಗಲಿ ನಡಿಗೆ