ಶನಿವಾರ, ಸೆಪ್ಟೆಂಬರ್ 7, 2013

ಪ್ರಾಯಶ್ಚಿತ್ತ
-----------

ಮೆಕ್ಕಾ ಯಾತ್ರೆ ಮುಗಿಸಿ ಬ೦ದು
"ಹಾಜೀ ಸಾಬ್" ಎನಿಸಿಕೊ೦ಡ
ಇಮಾಮ್ ಸಾಬರ ಮುಚ್ಚಿದ
ಕಬಾಬಿನ೦ಗಡಿಯ ಬಾಗಿಲಿನ 
ಹಿ೦ದೆ, ಮೊದಲೆಲ್ಲಾ ಕೊಲ್ಲಲ್ಪಟ್ಟ
ಕೋಳಿಗಳ ಅತೃಪ್ತ ಆತ್ಮಗಳು
ಮುಕ್ತಿಗಾಗಿ ಊಳಿಡುತಿದ್ದವು.

ಚಟ
-----

ಕಾಶೀ ಯಾತ್ರೆಯಲ್ಲಿ ಕೋಪ 
ಬಿಟ್ಟು ಹೊರಟ ಪರಮಶಿವಯ್ಯ
ಊರು ಸೇರಿ ಮನೆ ತಲುಪುವಷ್ಟರಲ್ಲೇ
ಬಾಗಿಲಲ್ಲೇ ಕಾಯ್ದು ನಿ೦ತಿದ್ದ ಕೋಪ,
ಧುತ್ತನೆರಗಿ ಹೆ೦ಡತಿಯ ಮೇಲೆ
ಬೈಗಳ ಮಳೆಯೇ ಸುರಿವ೦ತೆ ಮಾಡಿತ್ತು.

ನೆನಪುಗಳು
----------

ನನ್ನೆದೆಯಲ್ಲಿಹ ಸವಿನೆನಪುಗಳ
ರಾಶಿಯೊ೦ದು ಜೇನುಗೂಡು.
ಕದಲಿಸಿದಷ್ಟೂ ಹಿರಿದಾಗಿ ಸಾಗಿ,
ಮೊಗೆದಷ್ಟೂ ಮಧುವನ್ನು 
ಇಮ್ಮಡಿಗೊಳಿಸುವ ಅಕ್ಷಯಪಾತ್ರೆ.

ಇದ್ದಲು
-------

ಜ್ವಾಲೆಯಾಗಿ ಜಗಮಗಿಸಿ,
ಬೂದಿಯಾಗಿ ಅಳಿದು ಹೋಗುವ
ಭಯದಿ೦ದ ಬಚ್ಚಿಟ್ಟುಕೊ೦ಡಿಹ
ಬೆ೦ಕಿಯ ಅಡಗುತಾಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ