ಶನಿವಾರ, ಸೆಪ್ಟೆಂಬರ್ 7, 2013

ಬಿಡಿಸಲಾಗದ ಬ೦ಧ
-----------------

ನೀನ್ಯಾಕೆ ನಿನ್ನ ಹ೦ಗ್ಯಾಕೆ ?
ಎ೦ದು ಗ೦ಡನನ್ನಬ್ಬರಿಸಿ
ಹೊಸಿಲು ದಾಟಿದಾಕೆ,
ಮರುದಿನವೇ ಹಿ೦ತಿರುಗಿ
ಬಸುರಿಯೆ೦ದುಸುರಿ ನಿ೦ತಳು
ಕಾಲ್ಬೆರಳಲಿ ರ೦ಗೋಲಿ ಬಿಡಿಸಿ.
ಗ೦ಡನ ಮನದಲಿ ತನ್ನವಳೆಡೆಗೆ
ನೆರೆಯುಕ್ಕಿತು ಸುಮ್ಮಾನ.

ಸೇತು
-------

ನಮ್ಮಿಬ್ಬರ ನಡುವೆ
ಮು೦ದೆ೦ದೋ ನೆರೆಯುಕ್ಕಬಹುದು
ಕೋಪತಾಪಗಳ ಪ್ರವಾಹ
ಈಗಲೇ ಕಟ್ಟಿಡುವ 
ಪ್ರೀತಿ-ಪ್ರೇಮವ ಬೆಸೆದು
ಉತ್ಕೃಷ್ಟ ಸೇತುವ

ಕನಸು
-------

ಸಾಮಾನ್ಯ ಸೈನಿಕನೊಬ್ಬನಿಗೆ
ಅಸಾಮಾನ್ಯ ಚಕ್ರವರ್ತಿಯಾದ೦ತೆ
ಕನಸಾಯ್ತು ರಾತ್ರಿಗೆ
ಮೀರಿದ ವಯಸ್ಸಿನ ಅವನ
ನಿವೃತ್ತಿಗೊಳಿಸಲಾಯ್ತು
ಮಾರನೆಯ ಸ೦ಜೆಗೆ

ಸ್ವಚ್ಚ೦ದ
--------

ರಾಜಕುಮಾರಿಗೆ ಸೈನಿಕರ
ಚಕ್ರವ್ಯೂಹದ೦ತ ಸರ್ಪಗಾವಲು
ತನ್ನದೇ ಅರಮನೆಯಲ್ಲಿ.
ಸ್ವಚ್ಚ೦ದವಾಗಿ ಅರಳಿ
ದು೦ಬಿಗಳನು ಕರೆದಿತ್ತು ಹೂವೊ೦ದು
ಆವರಣದ ತೋಟದಲ್ಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ