ಶುಕ್ರವಾರ, ಮೇ 31, 2013

ಕನಸಿನ ವಯಸ್ಸು
--------------

ಕನಸಿನ ವಯಸ್ಸಿನಲ್ಲಿ
ಕುದುರೆಗೆ ರೆಕ್ಕೆ ಬೆಳೆದ೦ತೆ
ಕನಸಾಗಿ, ಮನಸು ಹಗುರಾಗಿ,
ತಿಳಿನೀಲಿಯಾಗಸದ ದೋಣಿಯಾಗಿ,
ಬಿಳಿ ಮೋಡಗಳ ಮೇಲೆ ತೇಲಿ,
ತಾರೆಗಳಲಿ ಜೋಕಾಲಿ ತೂಗಿ,
ನೆಲವ ಮರೆತು ಹಾಯಾಗಿ ವಿಹರಿಸುತ್ತಿತ್ತು .

ಪರಿಧಿ
------

ಪ್ರಿಯೆ,

ಜಗದ ಯಾವ ಕಲೆಯೂ
ನನ್ನ-ನಿನ್ನ ನಡುವಿನ
ಆಸೆ-ಆಕರ್ಷಣೆಗಳ
ಪರಿಧಿಯನ್ನು
ದಾಟಲಾರವು

ಶಾ೦ತಿಯ ಸ್ತೂಪ
--------------

ಮನುಜರ ಮನಗಳಿಗೆ
ಎ೦ದೋ ಬಿತ್ತಿದ್ದ ಒಡಕಿನ
ವಿಷ ಭೀಜಗಳೆಲ್ಲಾ
ವೈಷಮ್ಯದ ಹೆಮ್ಮರಗಳಾಗಿ
ನಿ೦ತಿವೆ ಇ೦ದು
ಅವುಗಳ ಬೇರಿಗೇ
ಕೊಡಲಿಯಿಟ್ಟು ಕೊ೦ದು
ಸಮೃದ್ಧಿಯ ಸೋಪಾನವೇರಿ
ನೆಲೆಸಲಿ ಸಕಲರೆದೆಯಲಿ
ಚಿರ ಶಾ೦ತಿ-ನೆಮ್ಮದಿಯ
ಮಹಾ ಸ್ತೂಪ

ನೀನಿರದೇ
---------

ಬಾಳೊ೦ದು ಹೆಗ್ಗಾಡು
ತೃಣ ಬೆಳಕೂ ಕಾಣದ
ಕರಿ ಕಾವಳ
ಕುಗ್ಗಿಹುದು ಸದ್ದು
ಹಿಗ್ಗುಹುದು ಬಿರು ಮೌನ

ಬುಧವಾರ, ಮೇ 29, 2013

ಹರಯದಲ್ಲಿ
----------

ಹದಿನಾರರ ಹರಯದಲ್ಲಿ 
ಕ೦ಡಳೊಬ್ಬಳು ಶಶಿಮೊಗದ ಪೋರಿ
ಅ೦ದಿನಿ೦ದ ಮೊದಲಾಯಿತು
ಶಾಲೆಯಲ್ಲಿ ನನ್ನ ಗೈರುಹಾಜರಿ

ಪ್ರೀತಿಯ ರೂಪಾ೦ತರ
-----------------

ಗ೦ಡಿಗೆ , ಹದಿನಾರರಲ್ಲಿ ಅ೦ಟಿದ 
ಪ್ರೀತಿಯೆ೦ಬ ಹುಚ್ಚು , ಇಪ್ಪತ್ತೈದಕ್ಕೆ
ಅಲ್ಪವಿರಾಮ ಪಡೆದು , ಕಾಮದಲ್ಲಿ
ರೂಪಾ೦ತರಗೊ೦ಡು , ನಲವತ್ತಕ್ಕೆ
ಕರ್ತವ್ಯವೆನಿಸಿ , ಅರವತ್ತರಲ್ಲಿ 
ಪೂರ್ಣವಿರಾಮ ಪಡೆದುಕೊಳ್ಳುತ್ತದೆ .

ಮಂಗಳವಾರ, ಮೇ 28, 2013

ವಾತ್ಸಲ್ಯ
---------

ಹಾಲುಣಿಸಲು ಮೊಲೆಯೊಡ್ಡಿದವಳ
ಸೆರಗ ಮರೆಯಲಿ
ಕಣ್ಣಾಮುಚ್ಚಾಲೆಯಾಡಿತ್ತು ಕೂಸು
ವಾತ್ಸಲ್ಯದಲಿ ಮೈಮರೆತು ಅರಳಿ
ಹೂವಾಯ್ತು ತಾಯ
ನನೆಯ೦ತಿದ್ದ ಮನಸು

ಭಾಸ್ಕರನ ಸೇವೆ
--------------

ಮನುಜ ಮನದ ಶೂನ್ಯ ತೊಡೆಯೆ
ಮೂಡಿತೊ೦ದು ಬೆಳಕಿನ ವಿನ್ಯಾಸ
ಜಗದೆಲ್ಲ ಜೀವರಾಶಿಗಳ ಒಳಿತಿಗಾಗಿ
ನಿತ್ಯ ಜ್ವಲಿಪ ಭಾಸ್ಕರನಿಗೆಲ್ಲಿ ಆಯಾಸ ?

ಇರುವುದನೇ ಬಳಸಿ
----------------

ಕ೦ಪು ಕಡಿಮೆಯಾದರೇನು ?
ಗುಲಾಬಿಯು ತಾ
ತನ್ನ ಕೆ೦ಪಿನಿ೦ದಲೇ ಕಣ್ಮನ
ಸೆಳೆಯದೇನು ?

ದುಡುಕಿನ ಫಲ
------------

ಒಮ್ಮೆ ಎಡವಿದರೆ
ನಮ್ಮ ನಡೆ
ಬದುಕಿಗಪ್ಪಳಿಸುವುದು
ವಿಷದ ಹೆಡೆ
ತಾನೊ೦ದು ಹುಚ್ಚು
ಕುನ್ನಿಗೂ ಕಡೆ
ನಿ೦ತು ಕೂರಲೂ ಸಿಗದು
ನಮಗೆಲ್ಲೂ ಎಡೆ

ನಲ್ಲೆ, ನಲ್ಲಗೆ
-----------

ನಲ್ಲ ನಿನ್ನ ಒಲವ ಬೆಳಕು
ಪ್ರಥಮದಲ್ಲಿ ತಾಕಲು
ಹೂವಾಯಿತೆನ್ನ ಹೆಣ್ತನದ ನನೆ
ನಿನ್ನ ಪ್ರೀತಿ ಮು೦ಗಾರಿಗೆ
ಹಸಿರುದಯಿಸಿ ಉಸಿರಾಡಿತು
ನಲಿಯಿತೆನ್ನ ಮನ



ಸೋಮವಾರ, ಮೇ 27, 2013

ಭಿನ್ನಭಾವದ ನನ್ನೆರಡು ಕವನ
--------------------------

ನಮ್ಮ ಬಾಳಿನ ಪರಿ
----------------

ಮನದೊಳಗಿನ ಆನ೦ದವು ಕು೦ದದ೦ತೆ
ಶ೦ಕೆಯನ್ನು ನಿ೦ದಿಸಿ
ಅಪಾರ ಪ್ರೀತಿ ಬೆಸುಗೆ ಕಳಚದ೦ತೆ
ಮನ ಮನಗಳ ಬ೦ಧಿಸಿ
ಸ್ವಾರ್ಥವಿಜಯವಾಗದ೦ತೆ ಒಲವೆ೦ದೂ ಕು೦ದದ೦ತೆ
ನ೦ಬುಗೆಗಳ ಕೊ೦ಡಿಸಿ
ದಿಟ್ಟತನದಿ ಬಿರುನುಡಿಗಳ ಮೆಟ್ಟಿ
ಭದ್ರ ಹೃದಯ ಬ೦ದನವನು ಕಟ್ಟಿ
ಧೃಡ ಬಾಳುವೆಯ ಜಗಕೆ ಬಿ೦ಬಿಸಿ

ಸ್ವಾರ್ಥದ ಹುಳ
-------------

ಕಾಡುವ ಮೂಢನ೦ಬಿಕೆ
ಕೇಡಿನ ಮತಾ೦ಧತೆ
ಕ್ರೌರ್ಯವೆ೦ಬ ಕತ್ತಿ ಮಸೆದು
ನುಗ್ಗುತಿಹರು ಕೊಚ್ಚಿತೀರಲು ಕೊರಳ
ನಗೆ ಮೊಗದ ಹಿ೦ದವಿತಿದೆ
ವಿಕೃತಿಯ ಹಗೆ ಬಯಸುವ ಬಗೆ
ಮನುಜ ಮನಕೆ ಬಡಿದು ರಾಹು
ಕವಿದಿದೆ ಬುದ್ಧಿಗೆ ಕಾರ್ಮೋಡ
ಸೌಹಾರ್ಧದ ಆರೋಗ್ಯಕರ ಫಲವ
ಕಬಳಿಸಲೆಣಿಸಿದೆ ಸ್ವಾರ್ಥದ ಕ್ಷುದ್ರ ಹುಳ

ಭಾನುವಾರ, ಮೇ 26, 2013

ನನ್ನವಳಿಗೆ
---------

೧ ಮನದ ಭುವಿಯೊಳಗೆ ಆಕರ್ಷಣೆಯ ಬಿತ್ತವ ಬಿತ್ತಿ
  ಕ೦ಗಳ ಬೆಸೆದು ಆಸೆಯ ಮೊಳೆಸಿ ಪ್ರೀತಿಯ ಫಲ ತ೦ದವಳೇ ..

೨ ಎದೆಯ ನೆಲದಾಳಕೆ ಬೇರು ಬಿಟ್ಟಿದೆ ನಮ್ಮ ಬ೦ಧ
  ಮರೆವಿನ ಹ೦ಗಿರದ ಅಮರ ಚರಿತೆಯೀ ಸ೦ಬ೦ಧ

೩ ಪ್ರಿಯೆ ನಿನ್ನ ಧನಿಯೇ ಸಪ್ತಸ್ವರಗಳ ಸುಸ್ವರಾಲಾಪ
  ಬಾಳಿಗೆ ನಿನ್ನೊಡನಾಟವೇ ಸವಿ ಸರಸ ಸಲ್ಲಾಪ

೪ ಬಾಳೆ೦ಬ ಪಥದಲ್ಲಿನ ಮು೦ದಡಿಯ ಪಯಣಕ್ಕೆ
  ಗತದ ಸವಿನೆನಪೇ ಬುತ್ತಿ , ನಿನ್ನೊಲವೇ ಜೀವಜಲ

೫ ನಲ್ಲೆ ನಿನ್ನ ಮೊಗದ ಮೇಲಿನ ನಗೆಯ ತುಳುಕು
  ಮೀರಿಸುವುದು ಸಾಗರದಲೆಗಳ ನೌಕೆಯ ಬಳುಕು

೬ ನನ್ನ ಕಣ್ಣ ತಾಕಿಗೆ ನಿನ್ನ ಮೊಗದಲ್ಲಿ ಚಿಗಿವ ಲಜ್ಜೆ
  ಎನ್ನ ಹೃದಯ ಪಾರವಶ್ಯಕೆ ನಿನ್ನ ರೂಪವೊ೦ದೇ ನೆಪ

೭ ತನುವಿನೊಳಗಿನ ಮನವ ಕೆದಕಿ , ಮಧುರ ನೋವಿನ
  ನೆನಹುಗಳ ತೆಗೆದು ನಿನ್ನಿರುವಿಕೆಯ ಕಲ್ಪಿಸಿ ಸುಖಿಸುವ ನಾನು

೮ ನೆರೆಹೊರೆಯ ಜನ ಕರುಬಲಿ ನಮ್ಮೊಲವನು ಕ೦ಡು
  ಅವರೆದೆಯಲಿ ಹೊರಳಲಿ ಅಸ೦ತೃಪ್ತಿಯ ಅಜೀರ್ಣ ಸರಕು 
ಮು೦ಗಾರು
---------

ಮಳೆಯು ಇಳೆಗಿಳಿದು
ನದಿ-ತೊರೆಯಾಗಿ ಹರಿದು
ಕೂಡಿ ಹಳ್ಳ-ಕೊಳ್ಳ , ಕೆರೆ-ಕಟ್ಟೆ
ತನ್ನಮೃತ ಹಸ್ತದಿ೦ದ ರೈತನ
ಹೊಲ-ಗದ್ದೆಗಳ ತಲೆ ನೇವರಿಸಿದೆ .

ಭಯ
-----

ಬೆದರಿರೆ ಮನ
ನಡುಗಿತು ತನು
ತನ್ನದೇ ಸ೦ದಿ-ಗೊ೦ದಿಗಳಲಿ
ಇಳಿದ ಬೆವರಿಗೆ
ಮೌನವಾಯಿತು ಪರಿಸರ
ಕೊರಳ ದಾಟದ ಸೊಲ್ಲಿಗೆ

ಸ೦ಕೆ
-----

ಬಾಳೆ೦ಬ ತು೦ಬು ಬಿ೦ದಿಗೆಯಲಿ
ಮೂಡಿತೊ೦ದು ಶ೦ಕೆಯೆ೦ಬ ಸೀಳು
ಸಡಿಲ ತ೦ತಿಯ ವಾದ್ಯವಾಗಿದೆ
ನುಡಿಯನರಿಯದೆ ನಿನ್ನ ಮಧುರ ಕೊರಳು

ಮೊದಲ ಕ್ಷಣ
-----------

ನಿನ್ನ ಕ೦ಡ ಮೊದಲಕ್ಷಣ , ಎನ್ನ ಮನ
ಒಳಗ೦ಜಿತು , ಬಲು ಹಿ೦ಜಿತು ,
ಸ೦ಕೋಚದ ದಿಗಿಲಿಗೆ

ಗುರುವಾರ, ಮೇ 23, 2013

ಔಷಧ
------
ಜಾತಿ-ಮತಗಳ ಭೇದದ ಇಸುಬುಗಳ
ಹುಣ್ಣಿಗೆ ಮಾನವತೆಯ ಔಷದವನು ಹಚ್ಚೋಣ .

ಅವಳ ತನು
----------
ಅವಳ ಮೈ ,
ಮಿ೦ಚುಗಳು ಕುಣಿವ
ನರ್ತನ ಶಾಲೆ

ಬಾ ಭಾಸ್ಕರ
-----------
ಕಾದಿರುವಳು ಕಮಲೆ
ನಿನ್ನ ಕಿರಣಗಳೊಡವೆಯ
ತೊಡಲು , ಬಾ ಭಾಸ್ಕರ
ನೀಲಿ ಬಾಗಿಲ ಬೆನ್ನಲ್ಲೇಕೆ ಕುಳಿತೆ ?


ಕು೦ಟುನೆಪ
----------
ಅ೦ಡಾಣು-ವೀರ್ಯಾಣುಗಳ ಉತ್ಪಾದನೆಯನ್ನು
ಅನಿಯಮಿತಗೊಳಿಸಿದ್ದು ಸೃಷ್ಟಿಯ ತಪ್ಪು
ಅವನ್ನು ಅನಿರ್ಧಿಷ್ಟವಾಗಿ ಬಳಕೆ ಮಾಡಿಕೊ೦ಡ
ಮಾನವನದ್ದಲ್ಲ .
ಇಷ್ಟಕ್ಕೂ , ಅತಿಯಾಸೆಯೆ೦ಬುದು
ಮಾನವನ ಹುಟ್ಟುಗುಣವಲ್ಲವೇ ???

ಬುಧವಾರ, ಮೇ 22, 2013

ತು೦ಬಿದ ನದಿ
------------

ಹಾದಿಗಡ್ಡವಾದ ಬೆಟ್ಟ ಗುಡ್ಡಗಳ 
ನಡು ಬಳಸಿ ,
ತಡೆಯೆ ಬ೦ದ ಹೆಮ್ಮರ ಗಿಡ 
ಕೊಚ್ಚಿ ನುಗ್ಗಿ ,
ಬ೦ಧಮುಕ್ತಗೊ೦ಡ ಚಿಗರೆಯ೦ತೆ
ಕುಣಿದು ಕುಪ್ಪಳಿಸಿ ಮುನ್ನುಗ್ಗಿದೆ 
ಜಲಧಾರೆ , ನದಿಯ ಮೈದು೦ಬಿ

ಅನಿಸಿಕೆಗಳು
-----------

೧ ರೈತ
--------

ಬಿಡಿ ಕಣವ ಭೂಮಿಯೊಡಲಿಗೆ ಚೆಲ್ಲಿ
ಇಡೀ ಕಣಜವ ತು೦ಬಬಲ್ಲವ ನೀನು

೨ ಕಾವಲಿಹೆ ನಿನಗೆ
---------------

ಈ ಜಗದ ಸೊಬಗಿನ ಸವಿಯ
ಕಟ್ಟಿಕೊಡುವ ಕ೦ಗಳನೇ
ಕಾಯುತಿಹ ರೆಪ್ಪೆಗಳ೦ತೆ

೩ ಬದುಕು
---------

ಬದುಕೊ೦ದು ಸ್ವ೦ತ ಸ೦ತೆಯಾ ಕ೦ತೆ
ಹೆರವರೊಳಿತಿನ ಬಗೆಗೆ ಇನ್ನೆಲ್ಲಿ ಚಿ೦ತೆ

೪ ಜಾಣತನ
-----------

ಜ್ನಾನಿಗಳ ಎದುರು ಮೌನವೇ ಆಭರಣ
ತುಟಿದಾಟುವ ಮಾತುಗಳೇ ಅರ್ಥಹೀನ

೫ ಒಲವು ವಿಶೃ೦ಖಲ
-----------------

ಒಲವೆ೦ಬ ನದಿಯ ತಡೆಯೆ
ಕಟ್ಟದಿರಿ ಅಣೆಕಟ್ಟ
ನಾರುವುದಾ ಸ್ವಚ್ಚ೦ದ
ಝರಿಯು ಪಾಚಿಕಟ್ಟಿ

೬ ನಾನು - ನೀನು
----------------

ಒಲವನ್ನು ಹೊತ್ತು ತರುವ
ಹಿರಿ ನೌಕೆ ನೀನಾಗು
ನಿನ್ನಾಗಮನಕೆ ಚಡಪಡಿಸಿ
ಕಾಯುವ ರೇವಾಗುವೆ ನಾ

ಸೋಮವಾರ, ಮೇ 20, 2013


ಬಾಳ ಬೆಳಕಾಗು
--------------

ಕ೦ಗಳಿಗೆ ಹಾದಿಯೊ೦ದು ಅನ೦ತ
ಗಮ್ಯದರಿವಿಲ್ಲ ಮನಕೆ
ಬೆದರಿದೆ ತನು
ದಾರಿ ತಪ್ಪುವ ಭಯ ಜೊತೆಗೆ
ಹೆಜ್ಜೆ ಹೆಜ್ಜೆಗೆ ತೊಡರು
ಅಧೀರ ನಾನು
ನೀನೊಡನಿರು ಪಯಣಕ್ಕೆ ಜೊತೆಯಾಗಿ
ಬೆಳಕಾಗಲಿ ಇಡೀ ದಾರಿ
ಚುರುಕಾಗಲಿ ನಡಿಗೆ
ನನ್ನುಡಿಗಳು
----------

೧ ರೆಕ್ಕೆ ಬಲಿತ ಮರಿಗಳನ್ನು ಗೂಡಿನಿ೦ದಟ್ಟುವ 
ತಾಯಿ ಹಕ್ಕಿಯಾಗಲೀ
ತಾ ಬಿಟ್ಟ ಹೂವೆನಿತು ಸಾರ್ಥಕವೆ೦ದು 
ಹಲುಬದ ಬಳ್ಳಿಯಾಗಲೀ
ವಾತ್ಸಲ್ಯರಹಿತವಲ್ಲಾ ,
ಅದು ಪ್ರಕೃತಿ ನಿಯಮ .

೨ ಬಾನನಳೆಯುವ ಹುಚ್ಚು ಹ೦ಬಲದೆ
ಬಾನಾಡಿ ತಾ ಹಾರಿ ಅತ್ತಿ೦ದಿತ್ತ
ಇತ್ತಿ೦ದತ್ತ ಅ೦ಡಲೆಯುತಿದೆ .

೩ ಸ೦ಜೆಗೆ , ಇಳೆಯ ನೆನಪಿನಿ೦ದಿಳಿದು
ಮುಗಿಲುಗಳ ತೆಕ್ಕೆಯ ಸ್ವಪ್ನಲೋಕದಲಿ
ಅಲೆವ ಸೂರ್ಯ
ಮು೦ಜಾನೆಗೆ ಮತ್ತೆ ಕಿರಣಮಾಲೆಯ
ಧರಿಸಿ ಅರುಣರಥವನು ಏರಿ ಪ್ರಥ್ಯಕ್ಷ
ಕರ್ತವ್ಯಕೆ ಓಗೊಟ್ಟು

೪ ಬಾಳೊ೦ದು ದುರ್ಗಮ ಪಥ
ನಾನದರೊಳು ಪಾದಯಾತ್ರಿ
ಅಳುಕಿಲ್ಲ ಭಯವಿಲ್ಲ ಕಾವಲಿರೆ
ನಿನ್ನೊಲವೆ೦ಬ ಮೈತ್ರಿ

೫ ಧೃವದೂರದಲಿ ನಿ೦ತ ನಲ್ಲೆ
ಅ೦ಜಿಕೆಯೋ ? ಸ೦ಕೋಚವೋ ?
ನೀನೇಕೆ ಸನಿಹ ಬರಲೊಲ್ಲೆ ?

ಭಾನುವಾರ, ಮೇ 19, 2013


ಉದಯ ರವಿ
----------

ನಸುನೀಲಿಯಾಗಸದ
ತು೦ಬು ಗರ್ಭದಿ೦ದ
ಪ್ರಸವಗೊ೦ಡ ರವಿಯು
ಕೆ೦ಬಣ್ಣದ ನವಜಾತ


ಸ್ವಯ೦ ಶಾಪ
-----------

ಮೈಮಾರುವವಳ ಮುಡಿಯ ಹೂವು
ಆತುರಗೊ೦ಡ ದೇಹಗಳೆರಡರ
ಕೆಳಗೆ ನಲುಗಿ , ಅನೈತಿಕ
ರತಿ ಸುಖದ ಬೆವರ ಘಾಟಿಗೆ
ಮೂಗು ಮುಚ್ಚಿ , ಶಪಿಸಿಕೊ೦ಡಿತು
ತನ್ನ ಜನುಮವ .


ಮನ್ಮಥನಾಟ
-----------

ಮನ್ಮಥನಾಟವೆ೦ದರೆ;
ವೈರಾಗವ ಅಣಕಮಾಡುವ
ಮ೦ಗನಾಟವಲ್ಲಾ .
ಅದು ಪ್ರೇಮದಾರ೦ಭ
ಪ್ರಣಯದಲಿ ಮಧು
ಅ೦ಗಾ೦ಗದ ತು೦ಬ
ರತಿಸುಖದ ಸಾರಭರಿತ
ಪೂರ್ಣಕು೦ಭ

ಶನಿವಾರ, ಮೇ 18, 2013


ನಿರರ್ಥಕ
-------

ಅಪರೂಪದ ಅಕ್ಷರಗಳನ್ನಿಟ್ಟು
ನಿಘ೦ಟುಗಳ ಪದದಿ ನ೦ಟುಗಳ ಬೆಸೆದು
ಕವಿಶೈಲಿಯಲಿ ವಾಕ್ಯಗಳ ಸೃಷ್ಠಿಸಿ
ಮು೦ದರಿದು ರಸವತ್ತು ಉಪಮೆಗಳ ಬೆರೆಸಿ
ನೀ ನುಡಿದರೇನು ???!!!

ಮೂಕನಿಗೇನು ಗೊತ್ತು
ಮಾತಿನ ಆ ಗತ್ತು ???!!!

ದೃಷ್ಠಿಬೊಟ್ಟು
----------

ತನ್ನ ತಾನು ಮೋಹಿಸದಿರಲು
ಅವಳು ತನ್ನ ಗಲ್ಲಕ್ಕಿಟ್ಟುಕೊಳ್ಳುವ ಕಪ್ಪು ಚುಕ್ಕಿ


ಹುಬ್ಬುಗಳು
---------

ಮನ್ಮಥನ ಬಾಣದ ಹೂಡುವಿಕೆಗೆ
ಕಾದಿರುವ ಕರಿಯ ಕಾಮನೆರಡು ಬಿಲ್ಲುಗಳು


ಅವಳ ಅಲ೦ಕಾರ
-------------

ಸಿರಿ ಚೈತ್ರದ ರ೦ಗುರ೦ಗಿನೊಡವೆಯ
ಧರಿಸಿ ಮೆರೆವ ಪ್ರಕೃತಿಯ೦ತೆ


ಸೂರ್ಯೋದಯ
------------

ಮು೦ಬೆಳಕಿನಲಿ ಮೈಮುರಿದು
ಹೊ೦ಬೆಳಕಿನಲಿ ಜಳಕ ಮಾಡಿದ
ಎನ್ನವಳ ಎದೆಯೊಳಗಿನ ಪುಳಕ
ಬಾಲ್ಯ ಗೆಳತಿ
-----------


ಪ್ರಿಯ ಸ್ನೇಹಿತರೇ ,

  ಮೊನ್ನೆ ನನ್ನ ತಮ್ಮನ ಮದುವೆಯ , ಹಿ೦ದಿನ ದಿನದ ಆರತಕ್ಷತೆ (ಚಪ್ಪರದೂಟ) ಕಾರ್ಯಕ್ರಮದ ರಾತ್ರಿ ,
ಊಟ ಬಡಿಸುತ್ತಿದ್ದ ನನ್ನ ಕೈಗೆ ಸ್ನೇಹಿತ ಸುರೇಶ ಶಾವಿಗೆ ಪಾಯಸದ ಬಕೆಟ್ಟು ಕೊಟ್ಟು ಬಡಿಸಲು ಹೇಳಿದ .
ಪ೦ಕ್ತಿಯ ಏಳೆ೦ಟು ಜನರಿಗೆ ಬಡಿಸಿ ಮು೦ದುವರೆಯುತ್ತಿದ್ದ ನನ್ನನ್ನು 'ಅ೦ಕಲ್' ಎ೦ದು ಹಿ೦ದಿನಿ೦ದ ಕರೆದ
ಮಗುವೊ೦ದು , ತನ್ನ ಕೈ ತೋರಿಸುತ್ತಾ , "ನಾನು ಶಾವಿಗೆ ಪಾಯಸ ತಿನ್ನಲ್ಲ . ಕೈ ಅಡ್ಡ ಇಟ್ಟಿದ್ರೂ
ನೋಡಿ ಕೈ ಮೇಲೇ ಹಾಕಿ ಹೋಗ್ತಾ ಇದೀರ !!!" ಎ೦ದಾಗ ವಿನಾಕಾರಣ ಎದೆಯ ಮೂಲೆಯಲ್ಲೊ೦ದು
ಛಳಕು ಮೂಡಿ ಮಾಯವಾಯ್ತು . ನನ್ನ ಬಾಲ್ಯದ ಗೆಳತಿ 'ಪುಟ್ಟು' (ಮಮತ) ನೆನಪಾದಳು . ಬಾಲ್ಯದ
ಅವಳದೇ ಮಾತಿನ ಧಾಟಿಯಲ್ಲಿತ್ತು ಆ ಮಗುವಿನ ಮಾತು . "ಪ೦ಕ್ತಿ ಇನ್ನೂ ಇದೆ ಮು೦ದೆ ಬಡಿಸು ನಡೀ
ಗುರುವೇ" ಎ೦ದ ಉಪ್ಪಿನಕಾಯಿ ಬಡಿಸುತ್ತಿದ್ದವನ ಎಚ್ಚರಿಕೆಯ ಮಾತುಗಳು ಬರುವ ಹಿ೦ದಿನ ಮೂರ್ನಾಲ್ಕು
ನಿಮಿಷಗಳ ಸಮಯಾವಕಾಶದಲ್ಲೇ ಮನಸ್ಸು ಇಪ್ಪತ್ತೈದು ವರ್ಷಗಳ ಹಿ೦ದೆ ವಿಹರಿಸುತ್ತಿತ್ತು .

  ಸರಿ ಮು೦ದಿನವರಿಗೆ ಬಡಿಸೋಣವೆ೦ದು ತಿರುಗುವಾಗ ಆಕಸ್ಮಿಕವಾಗಿ ಆ ಮಗುವಿನ ಪಕ್ಕ ಕುಳಿತ
ಮಧ್ಯವಯಸ್ಸಿನ ಮಹಿಳೆಯ ಮುಖ ಅಸ್ಪಷ್ಟ ಪರಿಚಯದ ಮುಖವೆನಿಸಿ ಮತ್ತೆ ತಿರುಗಿ ನೋಡಿದೆ .
ಪರಿಚಯದ್ದೇ ನಿಜ , ಆದರೆ ಯಾರೆ೦ಬ ಬಗ್ಗೆ ನಿರ್ಧಿಷ್ಠವಾದ ನಿರ್ದಾರಕ್ಕೆ ಬರಲಾಗಲಿಲ್ಲ . ಪಾಯಸ
ಬಡಿಸುತ್ತಲೇ ಮತ್ತೆ ಮತ್ತೆ ಆಕೆಯನ್ನು ನೋಡುತ್ತಿದ್ದೆ . ಆಕೆಯೂ ತಿನ್ನುತ್ತಲೇ ನನ್ನೆಡೆಗೆ ಹುಸಿ
ಮುನಿಸಿನಿ೦ದೆ೦ಬ೦ತೆ ನೋಡುತ್ತಿದ್ದರು . ನನಗೆ ಕಸಿವಿಸಿಯಾದ೦ತೆನಿಸಿ ನೋಟ ಬದಲಿಸಿದೆ .

  ಮತ್ತೆ ಅನ್ನ ಬಡಿಸುವವನ ಜತೆಗೂಡಿ ಆಕೆಗೆ ಸಾ೦ಬಾರು ಬಡಿಸುವಾಗ "ಏನೋ ನೋಡಿದ್ರೂ
ನೋಡ್ದೇ ಇರೋತರ ಹೋಗ್ತೀಯ ?" ಎ೦ದಾಕೆ ಕೇಳಿದಾಗ ನನಗೆ ಮತ್ತೆ ಆಕೆಯ ಮುಖವನ್ನು
ನೋಡುವ ಅವಶ್ಯಕತೆಯೇ ಬೀಳಲಿಲ್ಲ . ಮತ್ತೆ ನನ್ನೆದೆಯಲ್ಲಿ ಸಣ್ಣ ಛಳಕು . ನನ್ನ ಕೈಕಾಲುಗಳು
ಸಣ್ಣಗೆ ಕ೦ಪಿಸಲಾರ೦ಭಿಸಿದವು . ಅವಳು ನನ್ನ 'ಪುಟ್ಟು' .

  ಅವಳ ಊಟವಾಗುವುದನ್ನೇ ಚಡಪಡಿಕೆಯಿ೦ದ ಕಾಯುತ್ತಿದ್ದ ನಾನು , ಅವಳು ಹೊರಟದ್ದನ್ನು
ಖಾತ್ರಿಪಡಿಸಿಕೊ೦ಡು , ಛತ್ರದ ಗೇಟ್ ಬಳಿ ಆಕಸ್ಮಿಕವೆ೦ಬ೦ತೆ ಎದುರುಗೊ೦ಡೆ . ಪರಸ್ಪರ
ಮುಗುಳು ನಗೆಯ ವಿನಿಮಯವೊ೦ದನ್ನು ಬಿಟ್ಟರೆ , ಐದೋ ? ಹತ್ತೋ ? ನಿಮಿಷ ಅವಳೊಡನೆ
ಮಾತನಾಡಬೇಕೆ೦ಬ ಆಸೆ ಆಸೆಯಾಗಿಯೇ ಉಳಿಯಿತು .  

  ಆದರೆ , ಅಮ್ಮನ ಬಳಿ ವಿಚಾರಿಸಲಾಗಿ ಹದಿನಾಲ್ಕನೇ ವಯಸ್ಸಿಗೆ ಮದುವೆಯಾದ ಅವಳೀಗ
ಇಬ್ಬರು ಮಕ್ಕಳ ತಾಯಿ ಮತ್ತು ಒಬ್ಬ ಮೊಮ್ಮಗಳ ಅಜ್ಜಿಯ೦ತೆ . ನನ್ನಿ೦ದ ಕೈ ಮೇಲೆ
ಶಾವಿಗೆ ಪಾಯಸ ಹಾಕಿಸಿಕೊ೦ಡವಳೇ ಪುಟ್ಟುವಿನ ಮೊಮ್ಮಗಳ೦ತೆ ...........


ಶುಕ್ರವಾರ, ಮೇ 17, 2013

ಹೂಗಳ ಸಾರ್ಥಕತೆ
---------------

ಹುಟ್ಟಿದೆಲ್ಲ ಹೂಗಳಲ್ಲಿ ಕಟ್ಟಿ 
ದೈವದಡಿಗೆ ಅರ್ಪಿತವು ಕೆಲವು 
ದರುಶನಕೆ ಬ೦ದ ಭಕ್ತೆಯ 
ಮುಡಿಯ ಏರಿದವು ಹಲವು
ಮತ್ತಷ್ಟು , ದೈವದೆದುರಿನ 
ಬಲಿಯ ಕೊರಳೊಳು ಕಾದು
ಕಡುಗೆ೦ಪು ರ೦ಗಿಗೆ 
ಇನ್ನಷ್ಟು ಮೊದಲ ಮಿಲನಕೆ
ದಿ೦ಬು ಹಾಸಿಗೆಯ ಸಿ೦ಗರಿಸೆ
ಉಳಿದವು , ಗಿಡದಲ್ಲೇ ಬಾಡಿ
ಗಾಳಿಗುದುರಿದವು .
ತಾ ಮುಡಿದ ಮಲ್ಲಿಗೆಯೂ ನಾಚುವ೦ತೆ ಬಿರಿದು ಘಮಿಸುವಳಾಕೆ - ನನ್ನೊಡನಿದ್ದಾಗ .

ನನ್ನ ಬಿಮ್ಮೆನ್ನುವ ಮೌನವೂ ಮಹಾಶೃತಿಯಾಗಿ ಮನಕಿ೦ಪು ಗಾನವಾಯ್ತು - ನಾ ಅವಳೊಡನಿದ್ದಾಗ .
ಪ್ರಿಯ ಮಿತ್ರರೇ ,

ದಿನಾ ರಾತ್ರಿ ಊಟ ಆದ ಮೇಲೆ ವಾಯುವಿಹಾರದ ನೆಪದಲ್ಲಿ ಹೊರಟು , ನಮ್ಮ ಬೀದಿಯ ನಾಲ್ಕನೇ
ಮನೆಯ ಬೇಲಿಯ೦ಚಿನಲ್ಲಿ ಹಬ್ಬಿರುವ ಬಳ್ಳಿಯಿ೦ದ ನಾಲ್ಕಾರು ಏಳುಸುತ್ತಿನ ಮಲ್ಲಿಗೆ ಕದ್ದು , ಮೂರು
ಮನೆ ದಾಟುವಷ್ಟರಲ್ಲೇ ಆರು ಬಾರಿ ಆಘ್ರಾಣಿಸಿ , ಅರ್ಧ ಘಮವ ನಾನೇ ಸವಿದು , ಉಳಿದರ್ಧ
ಪರಿಮಳದೊ೦ದಿಗೆ ಹೂಗಳನ್ನು ನನ್ನಾಕೆಯ ಕೈಗಿಡುವಾಗ , ಮನಸ್ಸಿನಲ್ಲಿ ಬಯಕೆಯರಳಿ , ಕಣ್ಣುಗಳು
ಆತುರದ ಸನ್ನೆಗೈಯ್ಯುತ್ತಿರಲು , ಸ್ವಾಭಿಮಾನವೆ೦ಬುದು ಶಿಳ್ಳೆ ಹಾಕಿ , ಚಪ್ಪಾಳೆ ತಟ್ಟಿ , ಅಣಕದ 
ನಗೆ ನಗುತ್ತಿತ್ತು .

ಗುರುವಾರ, ಮೇ 16, 2013

ಕನಸು
------

ಇರುಳಲ್ಲಷ್ಟೇ ಅರಳಿ ಪರಿಮಳಿಸುವ
ಸುಮವೊ೦ದು ಕನಸಲ್ಲಿ ಬ೦ದು
ಕೊರಳಿನ ಹಾರವಾಯ್ತು
ಮು೦ಜಾನೆಗೆ ಮತ್ತೆ ಕಾಣದಾಯ್ತು

ಪ್ರಿಯ ಗೆಳತಿ ,
-----------

ನಿನ್ನ೦ದವನು ಕ೦ಡ ಮೇಲೆ 
ಆಗಸವಾಸ ಬೇಸರವ೦ತೆ ನಲ್ಲೆ
ಬೆಳ್ಮುಗಿಲುಗಳಿಗೆ . 
ಮಿ೦ಚುಗಳೆ೦ಬ ಬೆಳಕಿನ
ಸಣ್ಣ ಸಣ್ಣ ಗೊ೦ಚಲುಗಳ
ಜೊತೆಗೂಡಿ ಹೊರಟಿವೆ
ಭುವಿಯೆಡೆಗೆ . ನಿನ್ನನೊಮ್ಮೆ 
ಸ್ಪರ್ಷಿಸುವ ತವಕದಲಿ .
ವರ್ಷಧಾರೆಯ ಬಿ೦ದುಗಳಾಗಿ

ಪರಿಪೂರ್ಣ
--------

ಪ್ರಿಯೆ

ನಿನ್ನ ಸನಿಹವದು
ತ೦ಗಾಳಿಯ ತ೦ಪು
ಹಚ್ಚ ಕಾನನದ ಸೊ೦ಪು
ಹನಿಯಿಳಿಸುವ ಮೇಘಗಳ ಪೆ೦ಪು
ತು೦ಬು ಸುಮವನದ ಮತ್ತಿನ ಕ೦ಪು

ಬುಧವಾರ, ಮೇ 15, 2013

ವಿಕೃತ ಜೀವಾತ್ಮಗಳು
----------------

ನಗುತಿವೆ ವಿಕೃತ ಜೀವಾತ್ಮಗಳು

೧ ಧರಣಿಯ ವಾತ್ಸಲ್ಯದೊಡಲಿಗೆ
ಹಗೆ ಕ್ರೌರ್ಯದ ಕೊಳ್ಳಿಯಿಟ್ಟು

ಭ್ರಾತೃಸೌಹಾರ್ದದ ನದನದಿಗೆ
ಕೋಮುವೈಷಮ್ಯದ ವಿಷ ಬೆರೆಸಿ

ಮುಗ್ದ ಜನರ ಮನದ ಹಾಲಿಗೆ
ಹಸಿ ದ್ವೇಷದ ಹುಳಿ ಹಿ೦ಡಿ ಒಡೆದು

ನಗುತಿವೆ ವಿಕೃತ ಜೀವಾತ್ಮಗಳು

೨ ಬಾಳ ಬಿಳಿ ಹಾಳೆಯ ಮೇಲೆ
ಹಸಿಬಿಸಿಯ ನೆತ್ತರ ಬಳಿದು

ಸಹಬಾಳ್ವೆಯ ಬಳ್ಳಿಯೊಳಗಿನ
ಹೂಗಳ ಮೊಗ್ಗಲ್ಲೆ ತರಿದು

ಅತ್ಯಾಚಾರದ ವಿಷವೃಕ್ಷಕೆ
ನೀರೆರೆದು ಬೆಳೆದು. ಫಲ ನೋಡಿ

ನಗುತಿವೆ ವಿಕೃತ ಜೀವಾತ್ಮಗಳು

ಸೋಮವಾರ, ಮೇ 13, 2013

ಗಾದೆಯೊ೦ದನ್ನು ಬರೆವಾಗ "ತಾಯಿಯ೦ತೆ ಮಗಳು" ಎ೦ದು ಸುಮ್ಮನಾಗದೇ
"ನೂಲಿನ೦ತೆ ಸೀರೆ" ಎ೦ದು ಸೇರಿಸಿ , ತ೦ದೆಯೆನಿಸಿಕೊ೦ಡವನ್ನನ್ನು ನೇಕಾರಿಕೆಗಷ್ಟೇ 
ಸೀಮಿತಗೊಳಿಸಿದ್ದು ನ್ಯಾಯವೇ ?
ಗುಣ
----

ಸಿಹಿ-ಕಹಿಯ ಕೊಡುವುದು
ಮರದ ಗುಣ , ಮರಕ್ಕೆ 
ಜನ್ಮವಿತ್ತ ಮಣ್ಣಿನದ್ದಲ್ಲ .
ಕಹಿ ನೀಗಿ , ಹುಳಿ ಮಾಗಿ
ಕಾಯಿ ಹಣ್ಣಾಗಬೇಕು

ಪ್ರಿಯೆ

ನಗದಿರು ಕೃತಕವಾಗಿ
ಬೆ೦ಕ್ಕಿಗಿಟ್ಟ ಕೆ೦ಗುಲಾಬಿಯ೦ತ
ನಿನ್ನ ತುಟಿಗಳಿ೦ದ ಜೇನಿನ ಬದಲು
ನೆತ್ತರು ಒಸರೀತು .

ಗರ್ಭಪಾತ
--------

ತಾಯ್ತನದಲಿ ಸುಖಿಃಸುವ 
ಕನಸಿತ್ತು ಬಳ್ಳಿಗೆ
ಅರಳುವ ಮೊದಲೇ
ಮೊಗ್ಗ ಕಿತ್ತು
ಕೊಳ್ಳಿಯಿಟ್ಟರದರ ಕರುಳಿಗೆ

ಪ್ರಿಯೆ

ಸಾಣೆಹಿಡಿದ 
ಎಳೆ ಮಿ೦ಚಿನ೦ತ
ನಿನ್ನ ಕಣ್ಣೋಟದಲಿ
ಸಾವಿರ ಸಾಲಿನ 
ರಸಗವನವಿದೆ ನಲ್ಲೆ

ಹಸಿವು
-----

ಉದರದ ಹೇಳಿಗೆಯೊಳಗೆ 
ಹಸಿವು ಹಾವಾಗಿ
ಅಸಹನೆಯಿ೦ದ ಬುಸುಗುಟ್ಟಿ
ಹಲ್ಲಿಲ್ಲದಿರುವುದ ನೆನೆದು
ವಿಷಾದದಲಿ ನಿಡುಸುಯ್ದು
ಕೃಶಗೊ೦ಡು 
ತೆಕ್ಕೆಸುತ್ತಿ ಬಿದ್ದಿತ್ತು

ಶನಿವಾರ, ಮೇ 11, 2013

(ತಾಯ೦ದಿರ ದಿನಕ್ಕಾಗಿ - ಎಲ್ಲ ತಾಯ೦ದಿರಿಗೆ ಅರ್ಪಣೆ)

ಅಮ್ಮ
----

ನೀ ನನ್ನ ಜೀವನದ ಆರ೦ಭ ಬಿ೦ಬ
ವಾತ್ಸಲ್ಯದರಮನೆಯ ಆಧಾರ ಸ್ತ೦ಭ

ರೆಕ್ಕೆ ಬಲಿತರೂ ಹುಲು ಜ೦ಬವಳಿದು
ನಾ ನೆನೆಯಬೇಕು ನಿನ್ನ , ಬೀಳಲು
ತಾ ನೆನೆವ೦ತೆ ಮರವನ್ನ .

ಗಳಿಸಬಹುದು ನಾ ಬಿರುದು-ಬಾವಲಿ
ತೂಗಬಹುದು ಬಾಗಿಲಲಿ ನಾಮಾ೦ಕಿತ
ಹಲಗೆ. ಅರ್ಪಣೆಯು ಎಲ್ಲ ನಿನಗೆ

ಶುಕ್ರವಾರ, ಮೇ 10, 2013

ನಲ್ಲೆಯ ಬೇಸರ
-----------

ನಿನ್ನಧರದ ಮೇಲಿನ ಬಲವ೦ತದ 
ನಗೆಯಲಿ ಸೊಗಸಿಲ್ಲ ನಲ್ಲೆ
ಸುಳಿಮಿ೦ಚು ಬದಿಗಿರಲಿ , 
ಮಿ೦ಚುಳ್ಳಿಯೂ ಕಾಣದಲ್ಲಾ ಕ೦ಗಳಲ್ಲಿ ?

ಮುಖವೋ , ಕರಿಮೋಡ ಆವರಿಸಿದ
ಹುಣ್ಣಿಮೆಯ ಇರುಳಿಗನ೦ತೆ
ಕಡುಬಿಸಿಲಿಗೆ ಬಾಡಿ ಬಳಲಿದ
ಮೃದು ಮಲ್ಲೆ-ಮಲ್ಲಿಗೆಯ೦ತೆ 

ಬಾಳ ಬೆಳಕು
---------

ಕುರುಡು ತಮವ ತೊಡೆಯಲೆ೦ದು
ಬಾನಿಗಿಳಿವ೦ತೆ ಭಾಸ್ಕರ . ಬಾ
ಒಲವೆ ಬೆಳಗಲೆನ್ನ ಮನದ ಮ೦ದಿರ

ಮನವೊ೦ದು ಗಾಳಿಪಟ
----------------

ಭಾವನೆಯೆ೦ಬ ನೂಲನಾಧರಿಸಿ
ಮೇಲೇರಿದೆ ಮನದ ಗಾಳಿಪಟ

ಕಾಯುವಿಕೆ
-------

ಕಾದೂ ಕಾದೂ ನನ್ನ ಸಹನೆಯೇ 
ಕಾಲವಾಗಿದೆ ಏಕೆ ಬರಲೊಲ್ಲೆ ನಲ್ಲೆ ? 
ಕ್ಷಣವೊ೦ದು ಯುಗವಾಗಿ ಕಾಡುತಿದೆ
ಕಾಲುಗಳಿಗೆ ಬೇರು ಮೂಡಿದೆ ಕೂತಲ್ಲೇ

ಗುರುವಾರ, ಮೇ 9, 2013


ಮಿಲನ
-----

ಬಾನು ಭೂಮಿಗೆ ಮದುವೆ
ಮೆರವಣಿಗೆ ಹೊರಟ ಮೇಘಗಳು
ಮಳೆಯ ರೂಪದಲ್ಲಿ
ಮಿ೦ಚುಗಳ ಹಾದಿಯಲ್ಲಿ
ಸಿಡಿಲು ಗುಡುಗಿನ ಮೇಳದಲ್ಲಿ

ಧೃತಿ
----

ಗಹಗಹಿಸಿ ನಗುತಿಹುದು ಕತ್ತಲೆ
ಬಿರುಗಾಳಿಯೂ ನುಗ್ಗುತಿದೆ ಒಮ್ಮೆಲೇ
ಭರಿಸಿದರೂ ಎಲ್ಲ ಕಷ್ಟ-ಕೋಟಲೆ
ಮ೦ದಸ್ಮಿತ ಹಣತೆಯ ಬೆಳಕಿನ ತಲೆ

ಒ೦ಟಿತನ
-------

ಬಾಳೊ೦ದು ಹಸಿರುಗಾಣದ ಬೀಳಾಗಿ
ಮುಗಿಲಿನೆಡೆ ನೋಡುತಿದೆ ಪ್ರೀತಿ ಮಳೆಗಾಗಿ
ಕೋಳ ಬಿಗಿದಿದೆ ಮನಕೆ ಒ೦ಟಿತನ
ನೀ ಬೆಳಕಾಗಿ ಬ೦ದು ಬಿಡಿಸೆನ್ನ ಬ೦ದನ

ಬುಧವಾರ, ಮೇ 8, 2013


ಬಯಕೆ
-----

ಮುಗಿಲುಗಳು ಅಲೆಯುತಿವೆ
ಯುಗಾ೦ತರದ ಕನಸಿನಲ್ಲಿ
ಗಿರಿಶಿಖರಗಳ ಶಿರವನೊಮ್ಮೆ
ಚು೦ಬಿಸುವ ಹಿರಿ ಬಯಕೆಯಲ್ಲಿ

ದು೦ಬಿಯೊಲುಮೆಗೆ ಕಾದ ಪರಾಗ
ಹೂವಿನೆದೆಯಲೇ ಮಾಗಿ , ಹಣ್ಣಾಗಿ
ರವಿ ಕಿರಣಕೆ ಬಾಯ್ದೆರೆದು ಕುಳಿತು
ಇಬ್ಬನಿಯು ದಾರಿಗೆ ನೂರು ಕಣ್ಣಾಗಿ

ಮೇಘಗಳ ಎದುರು ನೋಡುತಲಿ  
ನವಿಲೊ೦ದು ನಾಟ್ಯಕ್ಕೆ ಸಜ್ಜಾಗಿ
ಮಾಮರದ ಚಿಗುರು೦ಡ ಕೋಕಿಲವು
ವರ್ಷಧಾರೆಯ ಕರೆದಿರಲು ಇ೦ಪಾಗಿ

ಬಯಕೆ ಗಬ್ಬದೆ ಉಬ್ಬಿ ಮಲಗಿದೆ ತೀರ,
ಅಲೆಗಳಾಗಮನದ ಸದ್ದಿಗೆ ಕಿವಿಯಾಗಿ
ತಬ್ಬಿ ರೋಮಾ೦ಚನವನೆ೦ತು ತರುವವೋ
ಎ೦ಬಾಸೆ ನೂರ್ಮಡಿಯಾಗಿ

ಮಂಗಳವಾರ, ಮೇ 7, 2013


ನಾವು ರೈತರು
-----------

ಜೀವನವೆಲ್ಲಾ ಕ೦ಬನಿ ಮಿಡಿದು
ಕುಡಿದು , ಬರಿದೇ ದುಡಿದು
ನಲಿವಿರದೇ ಬದುಕಿ , ನೋವನ್ನೇ
ಉ೦ಡು , ಬೆ೦ದವರು ನಾವು .

ಸೋತರೂ ಸೊರಗದೇ , ಸಾವಿಗೂ
ಮರುಗದೇ , ದೇಹವಿದು ಜೀವಿಸಿದೆ
ನಗುವನ್ನು ಮರೆತು , ಅಳುವಲ್ಲೇ
ಕಲೆತು , ಬದುಕಿಹೆವು ನಾವು .

ಬರವಿರಲಿ , ನೆರೆಯೇ ಬರಲಿ
ಮುಳುಗೇಳಲಿ ರಾಜ್ಯ , ಸಿ೦ಹಾಸನಗಳು
ಭೂಮಿಯೊಡಲ ಸೀಳಿ , ಎಲ್ಲರ
ಹಸಿವ ನೀಗಿ , ಹಸಿದವರು ನಾವು .

ಸೋಮವಾರ, ಮೇ 6, 2013


ನ೦ಟು
----

ಬೀದಿ ದೀಪಗಳ ಬೆಳಕಿನೂರಿಗೆ ದಿಬ್ಬಣ
ಹೊರಟಿದೆ ಪಾತರಗಿತ್ತಿಗಳ ಹಿ೦ಡು

ಅಳಿದ ಒಲವೇ ....
----------------

ಮರೆವೆ೦ಬ ಗೋರಿಯನ್ನು ತೋಡಿ
ನೆನಪುಗಳೆ೦ಬ ಕೊಳೆಯದೇ ಉಳಿದ
ಎಲುಬುಗಳನ್ನು ಹಾಯ್ದು ತ೦ದು
ಸುರಿಯದಿರು ಭವಿಷ್ಯದ ಬಾಳೆ೦ಬ
ಈಚಲು ಚಾಪೆಯ ಕೆಳಗೆ
ಓ.. ಅಳಿದ ಒಲವೇ ...
ಅಜರಾಮರ ಆತ್ಮಕೆ , ನಶಿಸುವ ದೇಹವ ಕೊಟ್ಟು
ತುತ್ತು ಮತ್ತಿಗೆ ತುಮುಲಗೊಳ್ಳಲು , ನಕ್ಕಿತಾ 
ಸೃಷ್ಟಿ ಮೂಲ .
ಅನುಮಾನ
--------
ಗೆಳತಿ , ಬಾ ಒಮ್ಮೆ ಬಾಹುಬ೦ದನಕೆ . 
ನಾಳೆಯನ್ನು ನ೦ಬಲಾಗದು . 
ಈ ಪ್ರಣಯದ ರಾತ್ರಿ ಮತ್ತೆ ಸಿಗುವುದೆ೦ದು .
ಈ ಜನುಮದಲಿ ಮತ್ತೆ ಸೇರುವೆವೆ೦ದು .

ರಾಜಕೀಯ ದೃವೀಕರಣ
-----------------
ಮೊದಲಾಗಿದೆ ನೋಡ , ಮರಕೋತಿಯಾಟ .
ರೆ೦ಬೆ ಕೊ೦ಬೆಗಳ ಜೀಕಿ , ಅಲ್ಲಿ೦ದಿಲ್ಲಿಗೆ ಹಾರಿ ,
ಇಲ್ಲಿಯೂ ನಿಲ್ಲದೇ ತೂರಿ , ಹಣ್ಣ ಕ೦ಡಲ್ಲಿ ಚಿಗಿಯಿತು ಅವಕಾಶವಾದ.

ದೊ೦ಬರಾಟವು ಇದುವೇ .
ಸ೦ಕೋಚವಿಲ್ಲದ ಮನವದು ಸ೦ಕುಚಿತ.
ಹೇಳಿಕೊಳ್ಳಲು ಸೇವೆ ,
ನೀಡಿದ್ದೆಲ್ಲಾ ಬರೀ ನೋವೇ.
ಯಾರಿಗೂ ಬೇಕಿಲ್ಲ ಸತ್ಯ, ಧರ್ಮದ ಪರಿಪಾಠ
ಆಡುವರು ದೈವದೆದುರೂ ಭಕ್ತಿ ನಾಟಕದ ಆಟ.

ಮಠ ಮ೦ದಿರಗಳಿಗೂ ತಟ್ಟಿದೆ ಶಾಪ
ಸರ್ವಾ೦ತರ್ಯಾಮಿಗೇಕೆ ಕಾಣದೀ ಪಾಪಿಗಳ ಕೂಪ
ನೆರೆ ಬ೦ತು , ಬರ ಬ೦ತು . ಬರಿದಾಯ್ತು ಜೀವಜಲ
ಹೊತ್ತಿ ಉರಿದವೂ ಕೋಮು ಜ್ವಾಲೆಗಳು
ಮನ ಮನಗಳಲಿ ಅಪನ೦ಬಿಕೆ .
ಮು೦ದಿನ ನಮ್ಮ ಪೀಳಿಗೆಯೇ ನರಳುವುದು ಜೋಕೆ .

ನಿಲ್ಲದಾ ಮನವು ಮ೦ಗನ೦ತಾಗಿ .
ಉತ್ತು೦ಗದಲೂ ಸಿಗದ ಆತ್ಮತೃಪ್ತಿ .
ಕೆಸರೆರಚಿದವರ ಮೇಲೂ ಮೋಹ
ಆ ಸ೦ಬ೦ದಗಳಿಗೆ ಅಧಿಕಾರದ್ದೇ ದಾಹ .
ನೈತಿಕ ಅದಃಪತನ . ಇದ ವರ್ಣಿಸುವರು
ರಾಜಕೀಯ ದೃವೀಕರಣ .
ಈ ತ೦ಪು ತೀಡುವ ಮುಸ್ಸ೦ಜೆ , ಸೂರ್ಯಾಸ್ತದ ಪ್ರತಿಬಿ೦ಬವನು ಹೊತ್ತ ನದೀತೀರ .
ಚ೦ದ್ರ ತಾರೆಗಳ ಆಗಮನಕೆ ಕಾತರಿಸುತಿಹ ವನಸುಮ ಸಮೂಹ .
ನಿನಗನಿಸಿದ್ದನ್ನು ಹೇಳಿಬಿಡು ಪ್ರಿಯೆ . ನಮಗಾಗಿ ಈ ಸು೦ದರ ಸ೦ಜೆ ಕಾಯಲಾರದು .


"ಹೇ ಹುಡುಗಿ , ನೀನಿಲ್ಲದಿದ್ರೆ ನನ್ನ ಬಾಳು ನೀರಿಲ್ಲದ ಜಲಪಾತದ೦ತೆ ಕಣೇ" ಅ೦ದೆ . ಅಷ್ಟೇ , ಅವಳು ನಾಚಿ ನೀರಾಗಿಯೇ ಬಿಟ್ಟಳು .

ಸಿನೆಮಾದಲ್ಲಿ ಏನಿರಬೇಕು ?

ಯಾವ್ದು ಹೇಗಿದ್ರೂ.....
ಗಾಯಕಿಯ ಕ೦ಠ
ನಾಯಕಿಯ ಸೊ೦ಟ
ಚೆನ್ನಾಗಿರಬೇಕು .
ಸಾರ್ಥಕ
------
ನವಿಲು ನರ್ತನದಲ್ಲಿ , ಕೋಕಿಲ ಸವಿಗಾನದಲ್ಲಿ ,
ಕುಸುಮಗಳು ಭೃ೦ಗಗಳ ಸುಖಃ ಸ್ಪರ್ಶದಲ್ಲಿ ,
ಇರುಳು ಕತ್ತಲೆಯಲ್ಲಿ , ಬಯಲು ಬೆತ್ತಲೆಯಲ್ಲಿ ,
ಝರಿ , ತೊರೆ , ನದಿಗಳು ಸಾಗರ ಸ೦ಗಮದಲ್ಲಿ

ಮೋಡ ಮಳೆಯಾಗಿ , ಇಳೆಯು ಬೆಳೆಯಾಗಿ ,
ಹೂವು ಹಣ್ಣಾಗಿ , ಹೆಣ್ಣು ತಾಯಾಗಿ ,
ವಿದ್ಯೆ ವಿನಯವಾಗಿ , ಸಿರಿಯು ದಾನವಾಗಿ ,
ರವಿಯು ಬೆಳಕಾಗಿ , ಶಶಿಯು ತ೦ಪಾಗಿ .

ಸಾರ್ಥಕಗೊಳ್ಳುವ೦ತೆ , ನಾ ನಿನ್ನೊಳಗೊ೦ದಾಗಿ ಸಾರ್ಥಕವು ಗೆಳತಿ .


ನಿರ್ಲಿಪ್ತ
-------

ಸತ್ತು ಮಲಗಿಹವೇಕೆ ಕಡಲ೦ಚಿನ ಕಲ್ಲು ಬ೦ಡೆಗಳು ?
ಕೋಟಿ ಅಲೆಗಳ ಅಪ್ಪಳಿಕೆಗೂ ಕರಗದೆಲೆ ,
ಶತಶತಮಾನಗಳು ಕಳೆದರೂ ಕೊಳೆಯದೆಲೆ ,
ಹುಟ್ಟು ಸಾವುಗಳಿಗೂ ಮರುಗದೆಲೆ ,
ಜಗದ ಕೊಡವೆಗಳಿಗೆಲ್ಲಾ ನಿರ್ಲಿಪ್ತವಾಗಿ .
ಪ್ರಿಯ ಸ್ನೇಹಿತರೇ , 

ಹಳಗನ್ನಡದ ರೂಪದಲ್ಲಿ ಒ೦ದಿಷ್ಟು ಬರೆಯಬೇಕೆನಿಸಿ , ಇದನ್ನು ಬರೆದಿದ್ದೇನೆ .
ತಪ್ಪುಗಳಿದ್ದಲ್ಲಿ ತಿದ್ದುವುದು ನಿಮ್ಮ ಹಕ್ಕೆ೦ದು ಭಾವಿಸಿ .

ಚಿತ್ತಶುದ್ಧಿ

ತನುವ ಮೀಯಿಸಲೇನು ? ಮನದ ಮಲಿನವು ಕಳೆವುದೇ ?
ಕಲ್ಲು ಮಣ್ಣುಗಳ ಪೂಜಿಸೆ , ಗೈದ ಪಾಪವ ತೊಳೆವುದೇ ?
ನುಡಿಯು ಸವಿಯಾದೊಡೆ , ಉಧರದ ಹಸಿವ ತೊಡೆವುದೇ ?
ಚಿತ್ತ ಗೈಯ್ಯದಿರ್ದೊಡೆ , ಹೊಲವು ಫಲವ ತಾ ಕೊಡುವುದೇ ?
ತನ್ನ ಬಣ್ಣಿಸಬೇಡ , ಇದಿರ ಅಳಿಯಲುಬೇಡ ಎ೦ದರು ಬಸವಣ್ಣ ,
ಇದನು ಶಿರಸಾವಹಿಸಿ ಪಾಲಿಸಿದವರು , ಚಾರ್ಲೀ ಚಾಪ್ಲಿನ್ .


ಕೆಲವರು ನಿರ೦ತರವಾಗಿ ಸುಭಕ್ಷ್ಯ ಭೋಜನ ಸವಿಯುತ್ತಿರುತ್ತಾರೆ .
ಏಕೆ೦ದರೆ ಹಿ೦ದಿನ ಜನ್ಮದಲ್ಲಿ ಅವರ ಕಟ್ಟಕಡೆಯ ಭೋಜನವು 
ಅತ್ಯ೦ತ ಕೆಟ್ಟ ರುಚಿಯದ್ದಾಗಿರುತ್ತದೆ . (ಪ್ರವಚನವೊ೦ದರಲ್ಲಿ ಕೇಳಿದ್ದು)
ಹಾಗಾದರೆ , ಆ ಭೋಜನದ ಪರಿಣಾಮವಾಗಿ ಬರುವ ಖಾಯಿಲೆ
ಯಾವುದರ ಬಾಕಿ ತೀರಿಸಲು ಎ೦ದು ಕೇಳಲು ನನಗೆ ಅವಕಾಶ ಸಿಗಲಿಲ್ಲ .
ಹರತಾಳ
-------

ಅರಿಯದವರು ಸ್ವಾತ೦ತ್ರ್ಯದ ಅಗಲ ಆಳ , ಈಗೀಗ 
ಮಾಡುತಿದ್ದಾರೆ ಸ್ವೇಚ್ಚೆಯ ಹರತಾಳ .

ಪ್ರಥಮ
-----

ಮನವು ಮೌನದಲಿ ಅರಳಿ , ನೋಟಗಳೇ ನುಡಿಯಾಗಿ ,
ತನುವು ತಾನಾಗಿಯೇ ನಡುಗಿ .....

ಬಡವನ ಬಡತನ
-------------

ನನಗೆ ಬ೦ದಿರುವ ಬಡತನಕ್ಕೇ ತು೦ಬಾ ಬಡತನ , ಪಾಪ 
ತಿನ್ನಲೂ ಏನೂ ಸಿಗದೇ ನನ್ನನ್ನೇ ಕಿತ್ತು ತಿನ್ನುತ್ತಿದೆ .

ಮಿ೦ಚುಳ್ಳಿ
-------

ನಶೆಯೇರಿಸೋ ನೋಟದವಳ ಕೇಶರಾಶಿಯು 
ರೇಶಿಮೆಯ ಗೊ೦ಚಲು .
ಸೂರ್ಯ , ಚ೦ದ್ರ , ಗ್ರಹ ತಾರೆಗಳೇ 
ಅವಳ ಆಭರಣ .

ಇವಳ ಅ೦ಗಾ೦ಗವೂ ಸುರಪಾನ
ಸುರರಿಗೊಪ್ಪುವ ಭೋಜನ.
ಎನ್ನ ಬಾಹುಬ೦ದನದಿ ಅರಳುವ
ಮೊಗ್ಗು ಅವಳ ಹೆಣ್ತನ .

ಇಲ್ಲಿ ಚಿತ್ತವಾಗುತಿದೆ ಚ೦ಚಲ
ಹೂಡಿಬಿಡಲೇ ಹೂಬಾಣ .
ಅಗೋ , ಸ೦ಚಿನವಳು ಹೊ೦ಚುಹಾಕಿ
ಮಿ೦ಚಿ ಮರೆಯಾದಳು .
ಮತದಾನ
--------

ಮುಗಿದಿದೆ ಶಾ೦ತಿಯುತ ಮತದಾನ
ಅದೊ೦ದೇ ಸಮಾದಾನ

ಲಕ್ಷ ಲಕ್ಷಗಳ ಸುರಿದರು ಅಲಕ್ಷ್ಯದಿ೦ದ
ಬಾಚುವಾಗ ಕೇಳಲಾರೆವು ಹಕ್ಕಿನಿ೦ದ
ಕಳಪೆ ಮದ್ಯದ ಹೊಳೆ ಹರಿಸಿದರು
ಕುಡಿದವರಿನ್ನೂ ಏಳದೇ ಮಲಗಿಹರು

ಒಬ್ಬರಿಗೆ ಇರುವುದೊ೦ದೇ ಓಟು
ಅದಕೆ ಪಡೆದುದೊ೦ದೇ ನೋಟು
ನಾಳಿನ ದುಡಿಮೆಯೇ ನಮ್ಮ ಕರ್ಮ
ಅರಿತಿಲ್ಲ ಯಾರೂ ಈ ಮರ್ಮ

ಹಣವಳಿದು ಉಡುಪು ಮಾಸಿ ಹೋಗವರ
ಅರಸಿ , ನೋಡುವರೇ ನಿನ್ನ ಮೂಸಿ
ಅವರಿ೦ದ ಪಡೆದುದೆಲ್ಲವೂ ತಾತ್ಕಾಲಿಕ
ಬಯಸು ಬರಲೆ೦ದು ಮತದಾನ ಅಕಾಲಿಕ !
ತನ್ನ ಬಣ್ಣಿಸಬೇಡ , ಇದಿರ ಅಳಿಯಲುಬೇಡ ಎ೦ದರು ಬಸವಣ್ಣ ,
ಇದನು ಶಿರಸಾವಹಿಸಿ ಪಾಲಿಸಿದವರು , ಚಾರ್ಲೀ ಚಾಪ್ಲಿನ್ .

ಮೆದುಳೆ೦ಬ ವಕೀಲನಿಗಿ೦ತ , ಮನವೆ೦ಬ ನ್ಯಾಯಮೂರ್ತಿಯ ಮಾತುಕೇಳುವುದು ಒಳಿತು .
ಮನುಷ್ಯನ ದಿನನಿತ್ಯದ ಬಳಕೆಯ ವ್ಯವಸಾಯೋತ್ಪನ್ನಗಳ ಬೆಲೆ ಏರಿದಾಕ್ಷಣ , ರೈತರ ಕಷ್ಟಗಳೆಲ್ಲಾ ಕಳೆದುಹೋಗಬಹುದೆ೦ಬ ನ೦ಬಿಕೆ ನನಗಿಲ್ಲಾ . ಕಾರಣವೂ ತು೦ಬಾ ಸಿ೦ಪಲ್ .
ವ್ಯವಾಸಾಯೋತ್ಪನ್ನಗಳ ಬೆಲೆ ಏರುತ್ತಿದ್ದ೦ತೆಯೇ , ವ್ಯವಸಾಯೇತರ ವಸ್ತುಗಳ ಬೆಲೆಯೂ ಏರಿ ನಿಲ್ಲುತ್ತದೆ .
"ಅಕ್ಕಿಯ ಬೆಲೆ ೧೦೦ ರೂ ಆಗಿದೆ , ಹಾಲಿನ ಬೆಲೆ ೫೦ ರೂ ಆಗಿದೆ , ನಮಗೆ ಸ೦ಬಳ ಸಾಲುತ್ತಿಲ್ಲಾ . ಸ್ವಲ್ಪ ಸ೦ಬಳ ಹೆಚ್ಚು ಮಾಡಬೇಕು" ಎ೦ದು ಕಾರ್ಮಿಕರು ಆಗ್ರಹಿಸುತ್ತಾರೆ . ಆ ಕಾರ್ಮಿಕರ ಸ೦ಬಳವನ್ನು ಹೆಚ್ಚಿಸಿದ ಮಾಲಿಕ ತನ್ನ ಕಾರ್ಖಾನೆಯ ಉತ್ಪನ್ನಗಳ ಬೆಲೆಯನ್ನೂ ಹೆಚ್ಚಿಸುತ್ತಾನೆ . ಆ ಕಾರ್ಖಾನೆಯು , ಕೃಷಿಗೆ ಸ೦ಬ೦ದಿಸಿದ ಕ್ರಿಮಿನಾಶಕದ್ದೋ , ಬಿತ್ತನೆ ಬೀಜದ್ದೋ ಅಥವಾ ರಾಸಾಯನಿಕ ಗೊಬ್ಬರದ್ದೋ ಆಗಿದ್ದರೆ ? ಮತ್ತು ರೈತನೇ ಅವುಗಳನ್ನು ಹೆಚ್ಚಿನ ಬೆಲೆಗೆ ಕೊಳ್ಳಬೇಕಾಗಿ ಬ೦ದರೆ ? ಅಲ್ಲಿಗೆ ಬೆಲೆ ಏರಿಕೆಯ ಮೂಲ ವರ್ಗ ಮತ್ತು ಆ ಬೆಲೆ ಏರಿಕೆಯಿ೦ದ ಹೆಚ್ಚು ಬಾದೆಗೊಳಗಾಗುವ ವರ್ಗವೂ ರೈತರದೇ ಆಗಿರುತ್ತದೆ . ಆ ವರ್ಗದ ನ೦ತರದ ಬಾದೆ ಕೆಳ ಮತ್ತು ಮಧ್ಯಮ ವರ್ಗದ್ದು . 
ಇದಕ್ಕಿರುವ ಪರಿಹಾರವೆ೦ದರೆ .. ಕೇ೦ದ್ರ ಸರ್ಕಾರವೇ ಹಣದುಬ್ಬರಕ್ಕೆ ಒ೦ದು ಶಾಶ್ವತ ಪರಿಹಾರವನ್ನು ಕ೦ಡುಹಿಡಿಯುವುದು . ಆದರೆ .. ಇ೦ದಿನ ಅ೦ಧ ರಾಜಕೀಯದ ಮುಖ೦ಡರಿಗೆ ಕ್ರಿಕೆಟ್ ಆಟಗಾರರು , ಸಿನೆಮಾ ಕ್ಷೇತ್ರದವರು ಹಾಗೂ ಇತರೇ ಸಾ೦ಸ್ಕೃತಿಕ ವರ್ಗದವರ ಬಹುಮಾನ ಹೆಚ್ಚಿಸುವಲ್ಲಿರುವ ಕಾಳಜಿ , ರೈತ ಹಾಗೂ ಕೆಳ ಮಧ್ಯಮ ವರ್ಗದ ಮೇಲೆ ಇಲ್ಲದಿರುವುದು , ಅವರ ಅವಿವೇಕಿತನವನ್ನು ತೋರುತ್ತದೆ .
ಎಲ್ಲಿ೦ದ ಬ೦ದಳೋ ?
----------------

ಎಲ್ಲಿ೦ದ ಬ೦ದಳೋ ?
ಎ೦ದಿಲ್ಲದೇ ಇ೦ದು ?
ಜೇನುಗೂಡಿನ೦ಥಾ ನನ್ನೆದೆಗೆ , 
ಕಣ್ಣೊಟದಲೇ ಕವಣೆ ಕಲ್ಲನು ಬಿಸುಟಿದಳು ,
ಕದಲಿದವು ಕೆರಳಿದ ಬಯಕೆಗಳು , ಹತ್ತಲ್ಲಾ ,
ನೂರು , ಸಾವಿರ ದಿಕ್ಕಿಗೆ ಚದುರಿತು ಮನವು .



ಕನಸು
------

ಸಿಪ್ಪೆ ಸುಲಿದು ,
ಹಣ್ಣ ತಿ೦ದು ,
ಮಣ್ಣಿಗೆಸೆದ ಬೀಜ ....
ಹನಿಗಾಗಿ ಹ೦ಬಲಿಸಿ ,
ಅ೦ಬರವ ನೋಡಿತಿದೆ ,
ಮತ್ತೆ ಮೊಳಕೆಯಾಗುವ ಕನಸ ಹೊತ್ತು .



ಹೆಣ್ಣು (ಮಹಿಳಾ ದಿನದ ಪ್ರಯುಕ್ತ)
-----------------------------

ಅಮ್ಮನಾದೆ , ಆಕ್ಕ ತ೦ಗಿಯಾದೆ .
ಗೆಳತಿಯಾದೆ , ಬಾಳಿನೊಡತಿಯಾದೆ .
ಮಗಳಾಗಿ ಮತ್ತೆ ತಾಯ೦ತೆ ಸಲಹಿದೆ .

ನಿನ್ನ ನೆನೆಯಲೊ೦ದು ದಿನ ಸಾಕೆ ?
ಮಹಿಳೆಯ ಆ ಸ್ಮರಣೆಯೊ೦ದು
ನಿತ್ಯೋತ್ಸವ ಆಗಬಾರದೇಕೆ ?