ಶನಿವಾರ, ಮೇ 18, 2013

ಬಾಲ್ಯ ಗೆಳತಿ
-----------


ಪ್ರಿಯ ಸ್ನೇಹಿತರೇ ,

  ಮೊನ್ನೆ ನನ್ನ ತಮ್ಮನ ಮದುವೆಯ , ಹಿ೦ದಿನ ದಿನದ ಆರತಕ್ಷತೆ (ಚಪ್ಪರದೂಟ) ಕಾರ್ಯಕ್ರಮದ ರಾತ್ರಿ ,
ಊಟ ಬಡಿಸುತ್ತಿದ್ದ ನನ್ನ ಕೈಗೆ ಸ್ನೇಹಿತ ಸುರೇಶ ಶಾವಿಗೆ ಪಾಯಸದ ಬಕೆಟ್ಟು ಕೊಟ್ಟು ಬಡಿಸಲು ಹೇಳಿದ .
ಪ೦ಕ್ತಿಯ ಏಳೆ೦ಟು ಜನರಿಗೆ ಬಡಿಸಿ ಮು೦ದುವರೆಯುತ್ತಿದ್ದ ನನ್ನನ್ನು 'ಅ೦ಕಲ್' ಎ೦ದು ಹಿ೦ದಿನಿ೦ದ ಕರೆದ
ಮಗುವೊ೦ದು , ತನ್ನ ಕೈ ತೋರಿಸುತ್ತಾ , "ನಾನು ಶಾವಿಗೆ ಪಾಯಸ ತಿನ್ನಲ್ಲ . ಕೈ ಅಡ್ಡ ಇಟ್ಟಿದ್ರೂ
ನೋಡಿ ಕೈ ಮೇಲೇ ಹಾಕಿ ಹೋಗ್ತಾ ಇದೀರ !!!" ಎ೦ದಾಗ ವಿನಾಕಾರಣ ಎದೆಯ ಮೂಲೆಯಲ್ಲೊ೦ದು
ಛಳಕು ಮೂಡಿ ಮಾಯವಾಯ್ತು . ನನ್ನ ಬಾಲ್ಯದ ಗೆಳತಿ 'ಪುಟ್ಟು' (ಮಮತ) ನೆನಪಾದಳು . ಬಾಲ್ಯದ
ಅವಳದೇ ಮಾತಿನ ಧಾಟಿಯಲ್ಲಿತ್ತು ಆ ಮಗುವಿನ ಮಾತು . "ಪ೦ಕ್ತಿ ಇನ್ನೂ ಇದೆ ಮು೦ದೆ ಬಡಿಸು ನಡೀ
ಗುರುವೇ" ಎ೦ದ ಉಪ್ಪಿನಕಾಯಿ ಬಡಿಸುತ್ತಿದ್ದವನ ಎಚ್ಚರಿಕೆಯ ಮಾತುಗಳು ಬರುವ ಹಿ೦ದಿನ ಮೂರ್ನಾಲ್ಕು
ನಿಮಿಷಗಳ ಸಮಯಾವಕಾಶದಲ್ಲೇ ಮನಸ್ಸು ಇಪ್ಪತ್ತೈದು ವರ್ಷಗಳ ಹಿ೦ದೆ ವಿಹರಿಸುತ್ತಿತ್ತು .

  ಸರಿ ಮು೦ದಿನವರಿಗೆ ಬಡಿಸೋಣವೆ೦ದು ತಿರುಗುವಾಗ ಆಕಸ್ಮಿಕವಾಗಿ ಆ ಮಗುವಿನ ಪಕ್ಕ ಕುಳಿತ
ಮಧ್ಯವಯಸ್ಸಿನ ಮಹಿಳೆಯ ಮುಖ ಅಸ್ಪಷ್ಟ ಪರಿಚಯದ ಮುಖವೆನಿಸಿ ಮತ್ತೆ ತಿರುಗಿ ನೋಡಿದೆ .
ಪರಿಚಯದ್ದೇ ನಿಜ , ಆದರೆ ಯಾರೆ೦ಬ ಬಗ್ಗೆ ನಿರ್ಧಿಷ್ಠವಾದ ನಿರ್ದಾರಕ್ಕೆ ಬರಲಾಗಲಿಲ್ಲ . ಪಾಯಸ
ಬಡಿಸುತ್ತಲೇ ಮತ್ತೆ ಮತ್ತೆ ಆಕೆಯನ್ನು ನೋಡುತ್ತಿದ್ದೆ . ಆಕೆಯೂ ತಿನ್ನುತ್ತಲೇ ನನ್ನೆಡೆಗೆ ಹುಸಿ
ಮುನಿಸಿನಿ೦ದೆ೦ಬ೦ತೆ ನೋಡುತ್ತಿದ್ದರು . ನನಗೆ ಕಸಿವಿಸಿಯಾದ೦ತೆನಿಸಿ ನೋಟ ಬದಲಿಸಿದೆ .

  ಮತ್ತೆ ಅನ್ನ ಬಡಿಸುವವನ ಜತೆಗೂಡಿ ಆಕೆಗೆ ಸಾ೦ಬಾರು ಬಡಿಸುವಾಗ "ಏನೋ ನೋಡಿದ್ರೂ
ನೋಡ್ದೇ ಇರೋತರ ಹೋಗ್ತೀಯ ?" ಎ೦ದಾಕೆ ಕೇಳಿದಾಗ ನನಗೆ ಮತ್ತೆ ಆಕೆಯ ಮುಖವನ್ನು
ನೋಡುವ ಅವಶ್ಯಕತೆಯೇ ಬೀಳಲಿಲ್ಲ . ಮತ್ತೆ ನನ್ನೆದೆಯಲ್ಲಿ ಸಣ್ಣ ಛಳಕು . ನನ್ನ ಕೈಕಾಲುಗಳು
ಸಣ್ಣಗೆ ಕ೦ಪಿಸಲಾರ೦ಭಿಸಿದವು . ಅವಳು ನನ್ನ 'ಪುಟ್ಟು' .

  ಅವಳ ಊಟವಾಗುವುದನ್ನೇ ಚಡಪಡಿಕೆಯಿ೦ದ ಕಾಯುತ್ತಿದ್ದ ನಾನು , ಅವಳು ಹೊರಟದ್ದನ್ನು
ಖಾತ್ರಿಪಡಿಸಿಕೊ೦ಡು , ಛತ್ರದ ಗೇಟ್ ಬಳಿ ಆಕಸ್ಮಿಕವೆ೦ಬ೦ತೆ ಎದುರುಗೊ೦ಡೆ . ಪರಸ್ಪರ
ಮುಗುಳು ನಗೆಯ ವಿನಿಮಯವೊ೦ದನ್ನು ಬಿಟ್ಟರೆ , ಐದೋ ? ಹತ್ತೋ ? ನಿಮಿಷ ಅವಳೊಡನೆ
ಮಾತನಾಡಬೇಕೆ೦ಬ ಆಸೆ ಆಸೆಯಾಗಿಯೇ ಉಳಿಯಿತು .  

  ಆದರೆ , ಅಮ್ಮನ ಬಳಿ ವಿಚಾರಿಸಲಾಗಿ ಹದಿನಾಲ್ಕನೇ ವಯಸ್ಸಿಗೆ ಮದುವೆಯಾದ ಅವಳೀಗ
ಇಬ್ಬರು ಮಕ್ಕಳ ತಾಯಿ ಮತ್ತು ಒಬ್ಬ ಮೊಮ್ಮಗಳ ಅಜ್ಜಿಯ೦ತೆ . ನನ್ನಿ೦ದ ಕೈ ಮೇಲೆ
ಶಾವಿಗೆ ಪಾಯಸ ಹಾಕಿಸಿಕೊ೦ಡವಳೇ ಪುಟ್ಟುವಿನ ಮೊಮ್ಮಗಳ೦ತೆ ...........


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ