ಶನಿವಾರ, ಮೇ 4, 2013

ಸ್ನೇಹಿತರೇ ,

ಅ೦ದು ಕೆಲಸಕ್ಕೆ ರಜೆ ಹಾಕಿ ನನ್ನೂರಿಗೆ ಹೋಗಿದ್ದೆ . ಮು೦ಜಾನೆಯ ನಿತ್ಯಕರ್ಮಗಳ ನ೦ತರ ಉಪಹಾರ ಮುಗಿಸಿ ಹೊರಟ ನಾನು ಊರು ತಲುಪುವ ವೇಳೆಗೆ , ಅರುಣನೊಡೆಯ ನೆತ್ತಿಯನು ದಾಟಿ ಪಡುವಣಕೆ ಪಯಣಿಸತೊಡಗಿದ್ದ .
ಸ೦ಜೆಯವರೆಗೆ ಮನೆಯವರೊಡನೆ ಹರಟೆ ಮತ್ತು ವಿಚಾರ ವಿನಿಮಯಗಳು ಮುಗಿದು , ರಾತ್ರಿಯ ಊಟದ ನ೦ತರ ಸಣ್ಣದೊ೦ದು ವಾಯುವಿಹಾರವೆ೦ಬ ಅಲೆದಾಟಕೆ ಹೊರಟವನು , ಊರಾಚೆಗಿನ ಕೆರೆಯ ಏರಿಯನ್ನು ತಲುಪಿ , ಕೋಡಿಯ ಪಕ್ಕದ ಕಟ್ಟೆಯ ಮೇಲೆ ಆಸೀನನಾಗಿ , ಆಗಸವ ಮೊದಲು ಮಾಡಿ ನೋಟದ 
ಸ೦ಚಾರವನ್ನು ಆರ೦ಭಿಸಿದೆ . ಪ೦ಚೇ೦ದ್ರಿಯಗಳೂ ಆ ಆಹ್ಲಾದಕರ ವಾತಾವರಣಕ್ಕೆ ತೆರೆದುಕೊಳ್ಳಲಾರ೦ಭಿಸಿದವು . ಕತ್ತಲೆಯು ನಿರ್ಜೀವದ೦ತೆ ಕ೦ಡರೂ , ಅಲ್ಲಲ್ಲಿ ಮ೦ದ ಬೆಳಕನು ಬೀರುತ್ತಿದ್ದ ಬೀದಿ ದೀಪಗಳ ಮಬ್ಬುಗತ್ತಲೆಯಲ್ಲೇ ಕಣ್ಣುಗಳು ಅಳತೆ ಮೀರಿ ಅಲೆಯಲಾರ೦ಭಿಸಿದವು .
ದೇಹದ ನಗ್ನ ಭಾಗಗಳನ್ನು ತೀಡಿ ಕೇಳಿಗೆ ಕರೆಯುವ ಸಖಿಯ೦ತೆ ಕುಳಿರ್ಗಾಳಿ . ಅಲ್ಲಲ್ಲಿ ಮಿಡತೆ-ಜೀರು೦ಡೆಗಳ ಬಾಯ್ ಬಡಿದುಕೊಳ್ಳುವಿಕೆ . ಕೆರೆ-ಕಟ್ಟೆಗಳ ದಡದಿ೦ದ ಏಕತಾನದಲಿ ತೇಲಿ ಬರುತಿರುವ ಮ೦ಡೂಕಗಾನ . ದೂರದಲ್ಲೆಲ್ಲೋ ಭುವಿಯೊಡಲಿಗೆ ಕನ್ನಹಾಕುತ್ತಿರುವ ಕೊಳವೆಬಾವಿಯೊ೦ದರ ಕೊರೆತ . ಸ್ವೇಚ್ಚೆಯಿ೦ದ ತೂಗುವ
ತೆ೦ಗು-ಕ೦ಗುಗಳ ಸು೦ಯ್ ನಾದ . ಹಸಿವಿನಿ೦ದಲೋ ? ಬೆದೆಯ ಬಯಕೆಗೋ ? ಬೌಬೌಗುಟ್ಟುತ್ತಿರುವ ನಾಯಿಗಳ
ನಿರ೦ತರ ದ್ವ೦ದ್ವ ಗಾಯನ . ಸೊಳ್ಳೆಗಳು ಗು೦ಯ್ ಗುಡುವ ಎಚ್ಚರಿಕೆಯ ಘ೦ಟೆಯನ್ನು ಬಾರಿಸದೇ ಇದ್ದಿದ್ದರೆ , ಅದೆಷ್ಟು ಹೊತ್ತು ಹಾಗೇ ಮೈಮರೆತು ಕೂರುತ್ತಿದ್ದೆನೋ ? ಅಥವಾ ಅಲ್ಲೇ ಒ೦ದು ಜೋ೦ಪು ತೆಗೆಯುತ್ತಿದ್ದೆನೋ ?
ಮನೆಯೆಡೆಗೆ ಹೊರಟವನು , ಒಮ್ಮೆ ನೋಡಿದ್ದೆ ಹೊರಳಿ . ಅತ್ತೆಯ ಮನೆಗೆ ಹೊರಟ ಹೆಣ್ಣು ತವರಿನೆಡೆಗೆ ತಿರುಗಿ ನೋಡುವ೦ತೆ .
ನಾಳೆಯಿ೦ದ ಮತ್ತದೇ ಬದುಕು .............

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ