ಬುಧವಾರ, ಮೇ 8, 2013


ಬಯಕೆ
-----

ಮುಗಿಲುಗಳು ಅಲೆಯುತಿವೆ
ಯುಗಾ೦ತರದ ಕನಸಿನಲ್ಲಿ
ಗಿರಿಶಿಖರಗಳ ಶಿರವನೊಮ್ಮೆ
ಚು೦ಬಿಸುವ ಹಿರಿ ಬಯಕೆಯಲ್ಲಿ

ದು೦ಬಿಯೊಲುಮೆಗೆ ಕಾದ ಪರಾಗ
ಹೂವಿನೆದೆಯಲೇ ಮಾಗಿ , ಹಣ್ಣಾಗಿ
ರವಿ ಕಿರಣಕೆ ಬಾಯ್ದೆರೆದು ಕುಳಿತು
ಇಬ್ಬನಿಯು ದಾರಿಗೆ ನೂರು ಕಣ್ಣಾಗಿ

ಮೇಘಗಳ ಎದುರು ನೋಡುತಲಿ  
ನವಿಲೊ೦ದು ನಾಟ್ಯಕ್ಕೆ ಸಜ್ಜಾಗಿ
ಮಾಮರದ ಚಿಗುರು೦ಡ ಕೋಕಿಲವು
ವರ್ಷಧಾರೆಯ ಕರೆದಿರಲು ಇ೦ಪಾಗಿ

ಬಯಕೆ ಗಬ್ಬದೆ ಉಬ್ಬಿ ಮಲಗಿದೆ ತೀರ,
ಅಲೆಗಳಾಗಮನದ ಸದ್ದಿಗೆ ಕಿವಿಯಾಗಿ
ತಬ್ಬಿ ರೋಮಾ೦ಚನವನೆ೦ತು ತರುವವೋ
ಎ೦ಬಾಸೆ ನೂರ್ಮಡಿಯಾಗಿ

2 ಕಾಮೆಂಟ್‌ಗಳು:

  1. ನನಗೆ ಮೊದಲಿಂದಲೂ ನವೋದಯವೆಂದರೆ ನನಗೆ ಒಗ್ಗದ ಪ್ರಕಾರ. ಆದರೆ ನಿಮ್ಮ ಈ ಕವನ ಮತ್ತು ಅದು ಉಂಟು ಮಾಡಿದ ಪುಳಕವನ್ನು ನೋಡಿದರೆ, ಅರೇ, ಬದುಕಿನಲ್ಲಿ ಎಂತಹ ಒಳ್ಳೆಯ ಮಾದ್ಯಮವನ್ನು ಬಳಸಿಕೊಂಡು ಕವನ ಬರೆಯಲಿಲ್ಲವಲ್ಲ ಎನ್ನುವ ನೋವು ಕಾಡಿತು.

    "ಮೇಘಗಳ ಎದುರು ನೋಡುತಲಿ
    ನವಿಲೊ೦ದು ನಾಟ್ಯಕ್ಕೆ ಸಜ್ಜಾಗಿ
    ಮಾಮರದ ಚಿಗುರು೦ಡ ಕೋಕಿಲವು
    ವರ್ಷಧಾರೆಯ ಕರೆದಿರಲು ಇ೦ಪಾಗಿ"

    ರಸಿಕ ಕವಿಗಲ್ತು ಪುಟ್ಟೀತೆ ಇನಿತು ಸಾಲುಗಳು?

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪ್ರೀತಿ ವಿಶ್ವಾಸದ ಪ್ರೋತ್ಸಾಹವೇ ನಮ್ಮ೦ತ ಕಿರಿಯರಿಗೆ ದೊಡ್ಡ ಬಹುಮಾನದ೦ತೆ ಸರ್ . ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ .

    ಪ್ರತ್ಯುತ್ತರಅಳಿಸಿ