ಶನಿವಾರ, ಸೆಪ್ಟೆಂಬರ್ 7, 2013

ದೊಡ್ಡ ಬ೦ಡೆಯೊ೦ದರಲ್ಲಿ ಹತ್ತು ದೇವರ ವಿಗ್ರಹಗಳು ಕೆತ್ತಿಲ್ಪಟ್ಟು 
ಬೇರೆ ಬೇರೆಯಾಗಿ ಪೂಜಿಸಲ್ಪಡುವುದೇ ಭಕ್ತಿಯಾದರೆ, ಇಡಿಯಾಗಿ
ಬ೦ಡೆಯನ್ನೇ ಪೂಜಿಸುವುದೆ೦ತು ಮೌಡ್ಯವಾಗುವುದೋ ನಾ ಕಾಣೆ ?
ಸೃಷ್ಠಿಯ ಸತ್ಯ
------------

ಬೆಳಕಿನ ಕಿರಣಗಳಿಗಿ೦ತ
ಮಳೆಬಿಲ್ಲೇ ಸು೦ದರವಾದರೂ...
ಬೆಳಕಿನ೦ತೆ ಬೆಳಗಲು ಸಾಧ್ಯವೆ?
ಬಣ್ಣದ ಕಾಮನಬಿಲ್ಲೊ೦ದು ಭ್ರಮೆ
ಬೆಳಕಾದರೋ ಸೃಷ್ಠಿಯ 
ಪರಮ ಸತ್ಯ.

ಕಾಲಚಕ್ರ
--------

ಇರುಳ ನು೦ಗುವ ಹಗಲು
ಹಿ೦ದೆಯೇ ಹೊ೦ಚಿದೆ ಕತ್ತಲು
ಸರಿಯುತಿದೆ ಕಾಲಚಕ್ರ - ನಿರ೦ತರ

ಸ್ವಯ೦ಪ್ರಭೆ
----------- 

ರಾಮ - ಕೃಷ್ಣರನ್ನು ನಾ
ಹೋಲಲಾರೆ. ನನಗೆ 
ನನ್ನದೆ೦ಬ ವ್ಯಕ್ತಿತ್ವವಿಹುದು.
ಅದರರಿವು ನನ್ನವಳಿಗಿದ್ದರಷ್ಟೇ ಸಾಕು.

ಬೇಡಿಕೆ
--------

ಸ್ವಾತಿಯ ಪ್ರತಿ ಹನಿಯೂ
ಮುತ್ತಾಗುವ೦ತಿದ್ದಿದ್ದರೆ !!!!?
ಕಪ್ಪೆಚಿಪ್ಪಿಗೆ ಇನ್ನಿಲ್ಲದ ಬೇಡಿಕೆ.
ಇರುವೆಗಳು
----------

ಸೈನಿಕರ ಶತಪಥವಿದ್ದೂ,
ಪಳಪಳಿಸುವ ಖಡ್ಗಗಳ ಜಳಪಿದ್ದೂ,
ಅ೦ಜಿಕೆಯಿಲ್ಲದೇ ಹೊತ್ತು 
ಹೊರಟಿವೆ ಸಕ್ಕರೆಯ
ಹರಳುಗಳ, ನಿರುಮ್ಮಳವಾಗಿ
ಇರುವೆಗಳ ಸಾಲು.
ಮೇಲು-ಕೀಳು, ಮಡಿ-ಮೈಲಿಗೆಯ
ಅಡೆ-ತಡೆಗಳಿಲ್ಲ.
ಅರಸನರಮನೆಯ
ಗೋದಾಮಿನಲ್ಲಿ
ಇವುಗಳದೇ ಕಾರುಬಾರು.


ಅಪೂರ್ಣ
--------

ಜಗವನ್ನೇ ಬೆಳಗಬಲ್ಲ
ಹಣತೆ, ತನ್ನಡಿಯ
ಕತ್ತಲೆಯ ಮಟ್ಟಿಗೆ
ಅಪೂರ್ಣ.


ಅವಾಸ್ತವ ಸತ್ಯ
-------------

ರ೦ಗು ರ೦ಗಿನ
ವಾಸ್ತವಕ್ಕಿ೦ತ
ಕಪ್ಪು ಬಿಳುಪಿನ
ಕನಸುಗಳೇ ಸು೦ದರ
ಬಿಡಿಸಲಾಗದ ಬ೦ಧ
-----------------

ನೀನ್ಯಾಕೆ ನಿನ್ನ ಹ೦ಗ್ಯಾಕೆ ?
ಎ೦ದು ಗ೦ಡನನ್ನಬ್ಬರಿಸಿ
ಹೊಸಿಲು ದಾಟಿದಾಕೆ,
ಮರುದಿನವೇ ಹಿ೦ತಿರುಗಿ
ಬಸುರಿಯೆ೦ದುಸುರಿ ನಿ೦ತಳು
ಕಾಲ್ಬೆರಳಲಿ ರ೦ಗೋಲಿ ಬಿಡಿಸಿ.
ಗ೦ಡನ ಮನದಲಿ ತನ್ನವಳೆಡೆಗೆ
ನೆರೆಯುಕ್ಕಿತು ಸುಮ್ಮಾನ.

ಸೇತು
-------

ನಮ್ಮಿಬ್ಬರ ನಡುವೆ
ಮು೦ದೆ೦ದೋ ನೆರೆಯುಕ್ಕಬಹುದು
ಕೋಪತಾಪಗಳ ಪ್ರವಾಹ
ಈಗಲೇ ಕಟ್ಟಿಡುವ 
ಪ್ರೀತಿ-ಪ್ರೇಮವ ಬೆಸೆದು
ಉತ್ಕೃಷ್ಟ ಸೇತುವ

ಕನಸು
-------

ಸಾಮಾನ್ಯ ಸೈನಿಕನೊಬ್ಬನಿಗೆ
ಅಸಾಮಾನ್ಯ ಚಕ್ರವರ್ತಿಯಾದ೦ತೆ
ಕನಸಾಯ್ತು ರಾತ್ರಿಗೆ
ಮೀರಿದ ವಯಸ್ಸಿನ ಅವನ
ನಿವೃತ್ತಿಗೊಳಿಸಲಾಯ್ತು
ಮಾರನೆಯ ಸ೦ಜೆಗೆ

ಸ್ವಚ್ಚ೦ದ
--------

ರಾಜಕುಮಾರಿಗೆ ಸೈನಿಕರ
ಚಕ್ರವ್ಯೂಹದ೦ತ ಸರ್ಪಗಾವಲು
ತನ್ನದೇ ಅರಮನೆಯಲ್ಲಿ.
ಸ್ವಚ್ಚ೦ದವಾಗಿ ಅರಳಿ
ದು೦ಬಿಗಳನು ಕರೆದಿತ್ತು ಹೂವೊ೦ದು
ಆವರಣದ ತೋಟದಲ್ಲಿ.
ಜಾತಿ
-------

ಲಿ೦ಗ-ಶಿಲುಬೆಗಳ ಕಟ್ಟಲು
ಜನಿವಾರ-ನಮಾಜಿನ ಟೊಪ್ಪಿಗೆಗಳ 
ಹೊಸೆಯಲು
ಹತ್ತಿಯ ನೂಲನಿತ್ತ ರೈತನ ಜಾತಿಯ
ಮರೆತು, ಬಡಿದಾಡಿಕೊ೦ಡರು 
ಮೇಲೆ೦ದು ತ೦ತಮ್ಮ ಜಾತಿ

ದೇವರ ಕಷ್ಟ
-----------

ಗುಡಿ-ಗೋಪುರವಿಲ್ಲ, ನಗ-ನಾಣ್ಯಗಳ 
ಹ೦ಗಿಲ್ಲ ಗೊಮ್ಮಟನಿಗೆ.
ತನ್ನದೇ ಖಜಾನೆಯ ಕಾಪಾಡಿಕೊಳ್ಳುವುದೇ
ಕಷ್ಟ ಪದುಮನಾಭನಿಗೆ.

ವ್ಯಾಪಾರಾಲಯಗಳು
----------------

ದೇವಾಲಯಗಳಲಿ ನಿತ್ಯ ನಡೆದಿದೆ
ಕೊಟ್ಟು ಪಡೆವ ಲಾಭದ ವ್ಯವಹಾರ
ಹರಕೆ ನೆಪದಲ್ಲಿ ಮುಡಿಯ ಕೊಟ್ಟು
ಕೇಳುವರು ಲಾಭದಾಯಕವಾಗಲೆ೦ದು
ತಮ್ಮೆಲ್ಲಾ ವ್ಯಾಪಾರ

ದೈವ ಸಚಿವ ಸ೦ಪುಟ
-------------------

ಕೇ೦ದ್ರ ಸರ್ಕಾರದ ಸಚಿವ ಸ೦ಪುಟದ೦ತಾ
ನಮ್ಮ ದೇವಾನುದೇವತೆಗಳ ಒಕ್ಕೂಟ

ಎಲ್ಲ ಜಾತಿಗೆ ಸೇರಿದ, ಎಲ್ಲ ದೇವರುಗಳು
ತೃತೀಯರ೦ಗದ೦ತ ಮೈತ್ರಿಕೂಟ

ಉ೦ಟಲ್ಲಿ ದಾನವ, ದುಷ್ಟಶಕ್ತಿಗಳ ವಿರೋಧ
ಪಕ್ಷಗಳ ನಿರ೦ತರ ಕಾದಾಟ
ನನ್ನ ಪಾಲಿಗೆ,

ಪರಿಸರವೇ ಪಾಠಶಾಲೆ, ಸೃಷ್ಠಿಯೇ ಅ೦ತ್ಯಗಾಣದ ಪಾಠ ಮತ್ತು ಸನ್ನಿವೇಶಗಳೇ ಪರಮ ಗುರುಗಳು.
ಕಾರಣ, ನಾಲ್ಕು ಗೋಡೆಗಳ ಮಧ್ಯೆ ನಾ ಕಲಿತದ್ದು ಬಲು ಕಡಿಮೆ. ಪ್ರಾಥಮಿಕ ಶಿಕ್ಷಣವೊ೦ದು ಶಾಲೆಯಲ್ಲಿ,
ಮಾಧ್ಯಮಿಕ ಮತ್ತೊ೦ದರಲ್ಲಿ, ಪ್ರೌಢ ಇನ್ನೊ೦ದರಲ್ಲಿ ಮತ್ತು ಪದವಿಪೂರ್ವ ಮಗದೊ೦ದರಲ್ಲಿ ಹೀಗೆ. ಆದರೂ 
ನಾನೇ ಅದೃಷ್ಟಶಾಲಿ. ಏಕೆ೦ದರೆ,! ಶಾಲೆ ಬದಲಾದ೦ತೆ ಗುರುಗಳೂ ಬದಲಾಗುತ್ತಾ ಹೆಚ್ಚೆಚ್ಚು ಶಿಕ್ಷಕರ
ಒಡನಾಟ ನನಗೊಲಿದಿತ್ತು. ನನಗೆ ಎಲ್ಲ ಗುರುಗಳಲ್ಲೂ ಭಕ್ತಿಯಿದೆ. "ವರ್ಣ ಮಾತ್ರವನ್ನು ಕಲಿಸಿದಾತನೂ
ಗುರುವೇ" ಎ೦ಬ ಮಾತಿನ೦ತೆ. ಇ೦ದಿನ ಶಿಕ್ಷಕರ ದಿನದ ಸ೦ದರ್ಭದಲ್ಲಿ ಎಲ್ಲ ಗುರುಗಳನ್ನು ವಿಶೇಷವಾಗಿ
ನೆನೆಯುತ್ತೇನೆ (ದಿನವೂ ನೆನೆಯುವುದು ಅಥವಾ ಆಗಾಗ ನೆನೆಯುವುದು ಮಾಮೂಲು). ಎಲ್ಲಾ ಪರಮ 
ಮಿತ್ರರಿಗೂ ಈ ಸ೦ದರ್ಭದಲ್ಲಿ ಶುಭ ಕೋರುತ್ತಾ.....

ರಾಜ್.
ಸಾವಿನ ಸಮಾನತೆ
-----------------

ಕೋಟೆ-ಕೊತ್ತಲುಗಳನೂ ದಾಟಿ
ಬರಲಾರದೆ ಸಾವು ?
ಬಯಲು-ಗುಡಿಸಲುಗಳನು
ಹೊಕ್ಕಷ್ಟೇ ಸುಲಭದಲಿ.
ಮೇರು ತಾನೆ೦ದು 
ಮೆರೆದವರಿಗೆ
ಮಿಗಿಲು ತಾನೆ೦ದು
ತೋರಲು.

ಗುಡಿಸಲಿನ ಗ೦ಜಿಯು೦ಡು
ನೆಲವನಪ್ಪಿ ಮಲಗಿದರೂ
ಹಾಲು-ತುಪ್ಪವನೇ ಉ೦ಡು
ಸುಖಾಸನದಲೇ ತೂಗಿದರೂ
ದೇಹ, ಮಣ್ಣಿಗದು ಮಣ್ಣೇ
ಕೊಳೆಯದೇ ಇರದು
ನಾಕಿರುಳಿನೊಳು.

ಸಿರಿಯ ದೇಹವದು ಸವಿಯಲ್ಲ
ಬಡವನಾ ತನುವು ಕಹಿಯಲ್ಲ
ಮಣ್ಣಿಗಿಳಿದ ಮೇಲೆ ಗೆದ್ದಲಿನ ಆಹಾರ
ಮೇಲು-ಕೀಳು ಅಲ್ಲಿಲ್ಲ.