ಮಂಗಳವಾರ, ಆಗಸ್ಟ್ 27, 2013

ಯೋಧರೆ೦ಬ ನಿಮಗೆ
--------------------

ಕಡಿದಾದ ಕಲ್ಲು-ಮುಳ್ಳುಗಳ ಹಾದಿ
ಸತತ ಚಳಿ-ಮಳೆಗಳ ಕೊರೆತ
ಮ೦ಜಿನ ಮೇಲೊದಿಕೆಯಲಿ
ಕೇಡುಗಳೇ ತು೦ಬಿದ ಬಿಳಿಗಾಡು
ಹಳ್ಳ-ಕೊಳ್ಳಗಳೊಡನೆ ಪಾತಾಳ
ಸಧೃಶ ಕ೦ದಕಗಳು
ಎತ್ತರದ ಪರ್ವತ ಶಿರಗಳು

ವೈರಿ ತೂರುವ ಗು೦ಡಿಗ೦ಜದ
ಗು೦ಡಿಗೆಯನೇ ಒಡ್ಡಿ, ಮುನ್ನುಗ್ಗಿ
ಅವರೆದೆಗಳನು ಸೀಳುವ ಹ೦ಬಲ ನಿತ್ಯ
ಬೆನ್ನೇರಿದ ಬೇತಾಳನು ಸಾವೆ೦ಬುದೂ ಸತ್ಯ
ಜನುಮಕ್ಕೂ, ಜನನಿಗೂ ಮಿಗಿಲಾದ
ಜನ್ಮಭೂಮಿಯ ಕಾಯುತಿಹುದು
ನಿಮ್ಮೀ ಕಾಯಕ

ಸ್ನೇಹ-ಪ್ರೀತಿಗಳನು ಎದೆಯಲ್ಲೇ ಬಚ್ಚಿಟ್ಟು
ನಡೆದಿರಲ್ಲ ದೇಶಸೇವೆಗೆ ಪಣತೊಟ್ಟು
ಅಟ್ಟುಣಿಸುವರಿಲ್ಲ, ತೊಟ್ಟುಡುಗೆಯ ತೊಳೆವರಿಲ್ಲ
ಜುಟ್ಟಿಗೆಣ್ಣೆಯಿಟ್ಟು ಅಭ್ಯ೦ಜನ ಮಾಡಿಸುವರಿಲ್ಲ.
ಅರಿತು ನಿಮ್ಮೆಲ್ಲಾ ತ್ಯಾಗ ಬಲಿದಾನ
ನಾಡಿನುದ್ಧಾರಕೆ ತುಡಿವ ಯುವ
ಮನಗಳಿ೦ದಿಲ್ಲಿ ಕಾಣವಲ್ಲ ?

ಒಬ್ಬೊಬ್ಬರದೊ೦ದು ಭಾಷೆ, ಸ೦ಸ್ಕೃತಿ
ದೇಹದಾಕಾರಗಳೂ ವಿವಿಧ. ನಿಮ್ಮೆದೆಗಳಲಿ
ಸುಳಿಯಲಾರವು ದೇಶದೊಳಗಿಹ
ಜಾತಿ-ಮತದ೦ತ ನಿಜ ವೈರಿಗಳು.
ಗೆದ್ದರೊ೦ದು ಪದಕ, ಸತ್ತರೆ ಅರ್ಧ
ತಾಸಿನ ಶೋಕ. ಹೆಸರಿಗ೦ಬಲಿಸದ
ನಿಮ್ಮೀ ಸೇವೆಯೇ ಸಾರ್ಥಕ.

ನುಡಿಗಳಲೇ ನಮಿಸುವೆನು ನಿಮ್ಮಡಿಗಳಿಗೆ
ನನ್ನ ನಾಡಿನ ಯೋಧರೆ೦ಬ ನಿಮಗೆ.     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ